ADVERTISEMENT

ದೇಶಸೇವೆಗೆ ಮಿಡಿದ ಮನಗಳಿಗೆ ಸಲಾಂ

ಪೊಲೀಸ್ ಹುತಾತ್ಮರ ದಿನಾಚರಣೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 14:41 IST
Last Updated 21 ಅಕ್ಟೋಬರ್ 2020, 14:41 IST
ಹಾವೇರಿ ತಾಲ್ಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಬುಧವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಪುಷ್ಪಗುಚ್ಛ ಅರ್ಪಿಸಿದರು
ಹಾವೇರಿ ತಾಲ್ಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಬುಧವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಪುಷ್ಪಗುಚ್ಛ ಅರ್ಪಿಸಿದರು   

ಹಾವೇರಿ: ‘ದೇಶದ ಭದ್ರತೆ, ಸಮಾಜದ ನೆಮ್ಮದಿ, ನಾಗರಿಕರ ಶಾಂತಿಯ ಬದುಕಿಗಾಗಿ ಶ್ರಮಿಸುತ್ತಲೇ ತಮ್ಮ ಪ್ರಾಣತ್ಯಾಗ ಮಾಡಿದ ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸೋಣ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಹೇಳಿದರು.

ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ ಕೆರಿಮತ್ತಿಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಬೆಳಿಗ್ಗೆ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.

ಸಶಸ್ತ್ರ ಪಡೆಯವರು ದೇಶದ ಆಂತರಿಕ ಶಾಂತಿಯನ್ನು ಕಾಪಾಡುತ್ತಿದ್ದಾರೆ. ದೇಶದ ಗಡಿಯಲ್ಲಿ ಹೋರಾಟ ಮಾಡಿ ಶತ್ರುಗಳಿಂದ ನಮ್ಮನ್ನು ರಕ್ಷಣೆ ಮಾಡುವುದು ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ಶಾಂತಿ ಕಾಪಾಡುವುದು ಅಷ್ಟೇ ಮುಖ್ಯವಾಗಿದೆ. ಇವರ ಕರ್ತವ್ಯ ಪ್ರಜ್ಞೆ, ದೇಶ ಸೇವೆಯನ್ನು ಇಂತಹ ಪವಿತ್ರ ಸಮಯದಲ್ಲಿ ಸ್ಮರಿಸೋಣ ಎಂದು ಹೇಳಿದರು.

ADVERTISEMENT

ಸಮಸ್ಯೆ ಇತ್ಯರ್ಥಕ್ಕೆ ಕ್ರಮ:

‘ನಾನು ಬಾಲ್ಯದಿಂದಲೇ ಡಿ.ಪಿ.ಒ, ಪೊಲೀಸ್ ವಸತಿಗೃಹದಲ್ಲಿ ಬೆಳೆದವನು, ಹಾಗಾಗಿ ಪೊಲೀಸರ ವೃತ್ತಿ ಬದುಕು, ಜೀವನ ಕ್ರಮ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಕೆರಿಮತ್ತಿಹಳ್ಳಿ ಡಿ.ಪಿ.ಒ ಸಮಸ್ಯೆಯನ್ನು ತಿಳಿದುಕೊಂಡಿದ್ದೇನೆ. ಇಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸುವೆ. ಈ ಸ್ಥಳದ ಬಗ್ಗೆ ಇಲಾಖೆಯಿಂದ ಅನೇಕ ದೂರುಗಳು ನನ್ನ ಗಮನಕ್ಕೆ ಬಂದಿವೆ. ಈ ಕರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಹುತಾತ್ಮರ ಸ್ಮರಣೆ:ಕರ್ತವ್ಯದಲ್ಲಿ ನಿರತರಾಗಿ ಈ ವರ್ಷ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡ ದೇಶದ ನಾನಾ ರಾಜ್ಯದ 264 ಹುತಾತ್ಮ ಪೊಲೀಸರ ಹೆಸರನ್ನು (01-09-2019 ರಿಂದ 31-08-2020 ರವರೆಗೆ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು ಅವರು ಹೇಳುವುದರ ಮೂಲಕ ಸ್ಮರಿಸಿ ಗೌರವ ನಮನ ಸಲ್ಲಿಸಿದರು.

ಹುತಾತ್ಮರಾದವರ ವಿವರ:ಆಂಧ್ರಪ್ರದೇಶ 3, ಅರುಣಾಚಲ ಪ್ರದೇಶ 2, ಬಿಹಾರ 9, ಛತೀಸಘರ್ 25, ಹರಿಯಾಣ 2, ಜಾರ್ಖಂಡ್ 8, ಕರ್ನಾಟಕ 17, ಮಧ್ಯ ಪ್ರದೇಶ 7, ಮಹಾರಾಷ್ಟ್ರ 5, ಮಣಿಪುರ 2, ಪಂಜಾಬ್ 2, ರಾಜಸ್ತಾನ 2, ತಮಿಳನಾಡು 3, ತ್ರಿಪುರಾ 2, ಉತ್ತರ ಪ್ರದೇಶ 9, ಉತ್ತರಾಕಾಂಡ್ 6, ವೆಸ್ಟ್ ಬೆಂಗಾಲ್ 11, ಅಂಡಮಾನ್ ಮತ್ತು ನಿಕೋಬಾರ್ 2, ದೆಹಲಿ 11, ಜಮ್ಮು ಮತ್ತು ಕಾಶ್ಮೀರ 2, ಅಸ್ಸಾಂ ರೈಫಲ್ 3, ಬಿಎಸ್.ಎಫ್ 25, ಸಿ.ಐ.ಎಸ್.ಎಫ್ 7, ಸಿಆರ್.ಪಿ.ಎಫ್ 29, ಎಫ್.ಎಸ್, ಸಿ.ಡಿ, ಎಚ್.ಜಿ 4, ಐ.ಟಿ.ಬಿ.ಪಿ 18, ಎಮ್.ಎಚ್.ಎ 9, ಆರ್.ಪಿ.ಎಫ್ 14, ಎಸ್.ಎಸ್.ಬಿ ಹೀಗೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿರುವ ವಿವಿಧ ತುಕಡಿಗಳ 15 ಯೋಧರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.