ADVERTISEMENT

ಕನ್ನಡವನ್ನು ಅನ್ನದ ಭಾಷೆಯಾಗಿಸಲು ಪ್ರಯತ್ನ: ಸಂಗಮೇಶ ಬಾದವಾಡಗಿ

ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 12:21 IST
Last Updated 10 ಮಾರ್ಚ್ 2021, 12:21 IST
ಸಂಗಮೇಶ ಬಾದವಾಡಗಿ 
ಸಂಗಮೇಶ ಬಾದವಾಡಗಿ    

ಹಾವೇರಿ: ‘ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಅಭಿಪ್ರಾಯವನ್ನು ಅಳಿಸಿ ಹಾಕುವ ದಿಶೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಉದ್ಯೋಗ ಆಧಾರಿತವಾದ ಭಾಷೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತೇನೆ.ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸುತ್ತೇನೆ’ ಎಂದು ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸಂಗಮೇಶ ಬಾದವಾಡಗಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪರಿಷತ್ತು–ಹಳ್ಳಿಗಳ ಸುತ್ತು’ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಟ್ಟಕ್ಕೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ರಿಯಾ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ತಾಲ್ಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತೇನೆ ಎಂದರು.

‘ಪರಿಷತ್ತಿನ ಕೇಂದ್ರೀಕೃತ ಆಡಳಿತ ಹಾಗೂ ಸಾಹಿತ್ಯಿಕ ಚಟುವಟಿಕೆಗಳ ಸಂಘಟನೆಯನ್ನು ವಿಭಾಗೀಯ ಮಟ್ಟಕ್ಕೆ ವಿಸ್ತರಿಸಿ, ವಿಕೇಂದ್ರೀಕರಣದ ನಾಂದಿಯೊಂದಿಗೆ ಪ್ರಾದೇಶಿಕ ನ್ಯಾಯ, ಪ್ರತಿಭಾ ನ್ಯಾಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು. ಗಡಿಭಾಗದಲ್ಲಿ ಕನ್ನಡಮಯ ವಾತಾವರಣವನ್ನು ಸೃಜನಗೊಳಿಸುವುದು, ಗಡಿ ಉತ್ಸವದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಧೀರೇಂದ್ರ ಎಲ್‌.ಎಕ್ಬೋಟೆ, ಕೆ.ಆರ್‌. ಕಂದಗಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.