ಪ್ರಾತಿನಿಧಿಕ ಚಿತ್ರ
ಹಾವೇರಿ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದಿಂದ ಜಿಲ್ಲೆಯಲ್ಲಿ ನಡೆಸುತ್ತಿರುವ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ ಅವಧಿಯನ್ನು ಮೇ 28ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ‘ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಿಸುವ ಸಮೀಕ್ಷೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸುವವರೆಗೂ ಸಮೀಕ್ಷೆ ನಡೆಯಲಿದೆ’ ಎಂದಿದ್ದಾರೆ.
‘ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ. ಮನೆಯ ಭೇಟಿ ಸಂದರ್ಭದಲ್ಲಿ ಮಾಹಿತಿ ಒದಗಿಸಲು ಆಗದೇ ಇದ್ದಾಗ ಮೇ 26, 27, 28ರಂದು ವಿಶೇಷ ಶಿಬಿರಗಳಲ್ಲಿ ಪಾಲ್ಗೊಂಡು ಮಾಹಿತಿ ನೀಡಲು ಅವಕಾಶವಿದೆ. ತಮ್ಮ ವ್ಯಾಪ್ತಿಯ ಮತಗಟ್ಟೆಗೆ ಆಧಾರ್ ಹಾಗೂ ಪಡಿತರ ಚೀಟಿ ಸಮೇತ ತೆರಳಿ, ಮಾಹಿತಿ ನೀಡಬಹುದು’ ಎಂದು ತಿಳಿಸಿದ್ದಾರೆ.
‘ಮನೆ ಭೇಟಿ ಸಂದರ್ಭದಲ್ಲಿ ಮಾಹಿತಿ ನೀಡದವರು ಆನ್‌ಲೈನ್ ಮೂಲಕವೂ ಮಾಹಿತಿ ದಾಖಲಿಸಬಹುದು. ಸ್ವಯಂ ಘೋಷಣೆಗೂ ಅವಕಾಶ ಕಲ್ಪಿಸಲಾಗಿದೆ. ಮೇ 19ರಿಂದ 28ರವರೆಗೆ ಆನ್‌ಲೈನ್ ಮೂಲಕ ಮಾಹಿತಿ ನೀಡುವ ಅವಧಿ ವಿಸ್ತರಿಸಲಾಗಿದೆ. ಆನ್‌ಲೈನ್ ಸ್ವಯಂ ಘೋಷಣೆಗೆ ಆಧಾರ್ ಹಾಗೂ ಜಾತಿ ಪ್ರಮಾಣಪತ್ರದ ಆರ್.ಡಿ. ಸಂಖ್ಯೆ ಅವಶ್ಯವಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಜನರು ಸಮೀಕ್ಷೆಗೆ ಸಹಕರಿಸಿ, ನ್ಯಾಯಯುತ ಮೀಸಲಾತಿ ಹಂಚಿಕೆಗಾಗಿ ನಿಖರ ಮಾಹಿತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 9481359000 ಸಂಪರ್ಕಿಸಬಹುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.