ADVERTISEMENT

‘ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯೂತಿ’

ಶರಣ ಸಂಸ್ಕೃತಿ ಉತ್ಸವ: ಜಮುರಾ ನಾಟಕೋತ್ಸವ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 10:01 IST
Last Updated 14 ಡಿಸೆಂಬರ್ 2019, 10:01 IST
ಹಾವೇರಿಯಲ್ಲಿ ಶುಕ್ರವಾರ ನಡೆದ ಜಮುರಾ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು
ಹಾವೇರಿಯಲ್ಲಿ ಶುಕ್ರವಾರ ನಡೆದ ಜಮುರಾ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು   

ಹಾವೇರಿ:‘ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯೋದ, ಕಲ್ಯಾಣದಾಗ ಬಸವಣ್ಣ ಇರುವಾಗ ಕಲ್ಲಿಗ್ಯಾಕ ಕೈ ಮುಗಿಯೋದ?’ ಎಂಬ ಜನಪದ ಮಾತಿದೆ. ಅಂದರೆ, ಸಾರ್ವಕಾಲಿಕ ಸಂದೇಶ, ಮೌಲ್ಯಗಳನ್ನು ಸಾರಿದ ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವವಾಗಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ನಾಯಕ ಹೇಳಿದರು.

ನಗರದ ಹೊಸಮಠದ ಆವರಣದಲ್ಲಿ ಶುಕ್ರವಾರ ನಡೆದ ಜಮುರಾ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ಅಡಿಗಲ್ಲುಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಈ ಮೌಲ್ಯಗಳು 12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿದ್ದವು. ಬಡವ–ಬಲ್ಲಿದ, ಅಕ್ಷರಸ್ಥ–ಅನಕ್ಷರಸ್ಥ, ಹೆಣ್ಣು–ಗಂಡು ಎಂಬ ಭೇದವಿಲ್ಲದೆ, ಸಮಾನತೆಯ ಸಂದೇಶ ಸಾರಿದ ಬಸವಣ್ಣ, ಸಾಮಾಜಿಕ ಕ್ರಾಂತಿಯ ಕಹಳೆಯನ್ನೇ ಊದಿದರು’ ಎಂದು ತಿಳಿಸಿದರು.

ADVERTISEMENT

‘ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ’ ಎಂಬ ವಚನವನ್ನು ಸಾರಿದವರು ಬಸವಣ್ಣ. ಸಮಾಜದಲ್ಲಿ ಇಂದು ನಡೆಯುತ್ತಿರುವ ಹಿಂಸಾಚಾರ, ದ್ವೇಷ, ಅಸೂಯೆಗಳಿಗೆ ಕಾರಣ ‘ಇವ ನಮ್ಮವನಲ್ಲ’ ಎಂದು ಭಾವಿಸಿರುವುದೇ ಕಾರಣ. ‘ಇವ ನಮ್ಮವ’ ಎಂದುಕೊಂಡರೆ ಸಮಾನತೆಯ ಸಮಾಜ ಕಟ್ಟಲು ಸಾಧ್ಯ’ ಎಂದು ನಾಯಕ ಅಭಿಪ್ರಾಯಪಟ್ಟರು.

‘ನಾಟಕ’ ಸಂಗೀತಕ್ಕಿಂತ ಶ್ರೇಷ್ಠ:

ಎಲ್ಲ ಕಲೆಗಳಲ್ಲಿ ಶ್ರೇಷ್ಠ ಎಂದರೆ ‘ಸಂಗೀತ’ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ‘ನಾಟಕ’ ಸಂಗೀತಕ್ಕಿಂತ ಸರ್ವಶ್ರೇಷ್ಠವಾದುದು. ನಾಟಕದಲ್ಲಿ ಸಂಗೀತ, ಸಂಭಾಷಣೆ, ನಾಟ್ಯ ಈ ಮೂರು ಅಂಶಗಳು ಅಡಕವಾಗಿವೆ. ಹಾಗಾಗಿಯೇ ರಂಗಕಲೆ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಕಾವ್ಯಕ್ಕಿಂತ ರಮ್ಯವಾದದು ನಾಟಕ. ನಾಟಕ ಕಲಾಪ್ರೇಮಿಯ ಹೃದಯ ತಟ್ಟುತ್ತದೆ, ಜತೆಗೆ ವಿವೇಚನೆಯನ್ನೂ ಬೆಳೆಸುತ್ತದೆ ಎಂದು ಹೇಳಿದರು.

ಬಯಲಾಟ, ಕಂಪನಿ ನಾಟಕ, ಹವ್ಯಾಸಿ ನಾಟಕ ಹೀಗೆ ನಾಟಕ ಪರಂಪರೆ ಬೆಳೆದುಕೊಂಡು ಬಂದಿದೆ. ಹವ್ಯಾಸಿ ನಾಟಕಗಳು ಮನರಂಜನೆಯ ಜತೆಗೆ ಪ್ರಸಕ್ತ ಸಮಸ್ಯೆಗಳ ಮೇಲೆ ಬೆಳಕು ಚೆಲುತ್ತಿವೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿವೆ. ನಾಟಕ ಜೀವಂತವಾದುದು, ಹಾಗಾಗಿಯೇ ನಮಗೆಲ್ಲ ಜೀವಂತಿಕೆ ತಂದುಕೊಡುತ್ತದೆ ಎಂದು ಬಣ್ಣಿಸಿದರು.

ಸನ್ಮಾನ:ಜನಪದ ಕಲಾವಿದರಾದ ವೀರೇಶ ಸಂಶಿನಮಠ, ಬಸವರಾಜ ಮಠಪತಿ ಹಾಗೂ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಅವರನ್ನು ಸನ್ಮಾನಿಸಲಾಯಿತು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ,ಶಿರಸಿಯ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಡಿವೈಎಸ್ಪಿ ಸಿ.ಬಿ.ಪಾಟೀಲ, ಉಪನ್ಯಾಸಕ ಡಾ.ನಾಗರಾಜ ಹಂಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.