ADVERTISEMENT

ಸಮಾನತೆಗಾಗಿ ತಹತಹಿಸಿದ ಕವಿ ಸಿದ್ದಲಿಂಗಯ್ಯ

ಆನ್‌ಲೈನ್‌ ಶ್ರದ್ಧಾಂಜಲಿ ಸಭೆ: ಕವಯತ್ರಿ ಡಿ.ಬಿ. ರಜಿಯಾ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 14:20 IST
Last Updated 12 ಜೂನ್ 2021, 14:20 IST
ಕವಿ ಸಿದ್ಧಲಿಂಗಯ್ಯ 
ಕವಿ ಸಿದ್ಧಲಿಂಗಯ್ಯ    

ಹಾವೇರಿ:ಸಮಾನತೆಗಾಗಿ ಸದಾ ತಹತಹಿಸಿದ ಕವಿ ಸಿದ್ಧಲಿಂಗಯ್ಯ, ತುಳಿತದಲ್ಲಿಯೇ ಪುಟಿದೇಳುವ ಶಕ್ತ ಕಾವ್ಯ ಬರೆದವರು. ಕಾವ್ಯವನ್ನು ಖಡ್ಗವಾಗಿಸುತ್ತ, ಎಲ್ಲ ಜನರ ಪ್ರೀತಿಗೆ ಪಾತ್ರರಾದ ಈ ಕಾಲದ ಬಹು ದೊಡ್ಡ ಕವಿಯಂದು ಶಿವಮೊಗ್ಗದ ಹಿರಿಯ ಕವಯತ್ರಿ ಡಿ.ಬಿ. ರಜಿಯಾ ನುಡಿದರು.

ಹಾವೇರಿಯ ಸಾಹಿತಿ ಕಲಾವಿದರ ಬಳಗ, ಹಂಚಿನಮನಿ ಆರ್ಟ್‌ ಗ್ಯಾಲರಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ಆನ್ಲೈನ್ ಶ್ರದ್ಧಾಂಜಲಿ ಸಭೆಯಲ್ಲಿ ಮೇಲಿನಂತೆ ಮಾತನಾಡಿ, ಕಾವ್ಯವನ್ನು ನೆಲಕ್ಕೆ ತಂದ ಕವಿ ಎಂದು ಬಣ್ಣಿಸಿದರು.

ಹುಬ್ಬಳ್ಳಿಯ ಕವಿ ಸಿ.ಎಂ. ಚನಬಸಪ್ಪ ಅವರು ‘ಸದಾ ಸ್ನೇಹ ಜೀವಿಯಾಗಿದ್ದ ಸಿದ್ಧಲಿಂಗಯ್ಯ ಅವರ ಸ್ನೇಹಪರತೆ ಎಲ್ಲರ ಮನಸ್ಸನ್ನು ಗೆದ್ದಿತ್ತು. ‘ಮತ್ತೆ ಬಂತು ಚೈತ್ರ’ ಎಂಬ ತಮ್ಮ ಕವನ ಸಂಕಲನಕ್ಕೆ ಸಿದ್ಧಲಿಂಗಯ್ಯ ಅವರಿಂದ ಕಾಡಿ ಬೇಡಿ ಬೆನ್ನುಡಿ ಬರೆಸಿಕೊಂಡು ಅದರ ಬಿಡುಗಡೆಗೂ ಕರೆದದ್ದನ್ನು ನೆನಪಿಸಿಕೊಂಡರು.

ಹಿರಿಯ ಲೇಖಕ ಪ್ರೊ.ಕೋರಗಲ್ ವಿರೂಪಾಕ್ಷಪ್ಪ ಮಾತನಾಡಿ ‘ದಮನಿತರ ಲೋಕವನ್ನು ತಮ್ಮ ಕಾವ್ಯದಲ್ಲಿ ಅನಾವರಣಗೊಳಿಸಿದ ಡಾ.ಸಿದ್ಧಲಿಂಗಯ್ಯ ಕನ್ನಡ ಕಾವ್ಯದ ಅಂಬೇಡ್ಕರ್‌ ಎಂದು ಹೇಳಿ ಅವರ ಹೋರಾಟದ ಹಾಡುಗಳು ಸದಾ ಅನುರಣಿಸುತ್ತವೆ’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಅವರು ತಮ್ಮ ಇಲಾಖಾ ಹಿನ್ನೆಲೆಯಲ್ಲಿ ಸಿದ್ಧಲಿಂಗಯ್ಯ ಅವರ ಒಡನಾಟ ಮತ್ತು ಕಾರ್ಯವೈಖರಿಯನ್ನು ನೆನಪಿಸಿಕೊಂಡು ದಣಿವರಿಯದ ದಕ್ಷ ಆಡಳಿತಗಾರ ಡಾ.ಸಿದ್ಧಲಿಂಗಯ್ಯ ಎಂದರು.

ಬೇರೆ ಬೇರೆ ಭಾಗದಿಂದ ಹಿರಿ ಕಿರಿಯ ಸಾಹಿತಿ ಕಲಾವಿದರುಗಳಾದ ವ್ಹಿ.ಎನ್. ತಿಪ್ಪನಗೌಡ್ರ, ಡಾ.ಯಶೋಧಾ ಜವಳಗೇರಿ, ಹಿರಿಯ ಕವಿ ಸತೀಶ ಕುಲಕರ್ಣಿ, ಡಾ.ಪುಷ್ಪಾ ಶಲವಡಿಮಠ, ದೇವರಾಜ ಹುಣಸಿಕಟ್ಟಿ, ಪ್ರೊ.ಮಾರುತಿ ಶಿಡ್ಲಾಪೂರ, ವಸಂತ ಕಡತಿ, ಎಸ್.ಆರ್. ಹಿರೇಮಠ, ಜಿ.ಎಂ.ಓಂಕಾರಣ್ಣನವರ, ಈಡಿಗೇರ ವೆಂಕಟೇಶ, ಜಗದೀಶ ಚೌಟಗಿ, ಶಂಕರ ತುಮ್ಮಣ್ಣನವರ, ಚಂದ್ರಶೇಖರ ಮಾಳಗಿ, ಮಾರುತಿ ಸಿರಿಗನ್ನಡ, ರೇಣುಕಾ ಗುಡಿಮನಿ ಮುಂತಾದ ಇಪ್ಪತ್ತು ಜನರು ಸಿದ್ಧಲಿಂಗಯ್ಯ ಅವರ ಒಡನಾಟ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.

ಕಲಾವಿದ ಕರಿಯಪ್ಪ ಹಂಚಿನಮನಿ ಶ್ರದ್ಧಾಂಜಲಿ ಸಭೆಯನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.