ADVERTISEMENT

ರೈತ ಸಂಘದಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 15:51 IST
Last Updated 15 ಆಗಸ್ಟ್ 2020, 15:51 IST
ಹಾವೇರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ಶನಿವಾರ ರೈತರು ಮೌನ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ನೇತೃತ್ವದಲ್ಲಿ ಶನಿವಾರ ರೈತರು ಮೌನ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ವಿದ್ಯುತ್‌ ವಲಯದ ಖಾಸಗೀಕರಣವನ್ನು ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ನಗರದ ಮಹಾತ್ಮಗಾಂಧಿ ವೃತ್ತದ ಬಳಿ ನೂರಾರು ರೈತರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.

ಕಾರ್ಪೊರೇಟ್‌ ಕಂಪನಿ ಮತ್ತು ಬಂಡವಾಳಶಾಹಿಗಳಿಗೆ ಕೆಂಪು ನೆಲಹಾಸು ಹಾಸುವ ಮೂಲಕ ಬಡರೈತರನ್ನು ಬೀದಿಗೆ ತಳ್ಳಲು ಈ ತಿದ್ದುಪಡಿ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಈ ತಿದ್ದುಪಡಿಗಳನ್ನು ಹಿಂಪಡೆಯಬೇಕು. ವಿದ್ಯುತ್‌ ವಿತರಣೆಯನ್ನು ಖಾಸಗಿಯವರಿಗೆ ಕೊಡಲು ಸರ್ಕಾರ ಹುನ್ನಾರ ನಡೆಸಿದೆ. ಜಿಲ್ಲೆಯ ಸುಮಾರು 1.30 ಲಕ್ಷ ರೈತರು ಪಂಪ್‌ಸೆಟ್‌ ಹೊಂದಿದ್ದು, ಶೇ 75ರಷ್ಟು ವಿದ್ಯುತ್‌ ಕೃಷಿಗೆ ಬಳಕೆಯಾಗುತ್ತಿದೆ. ವಿದ್ಯುತ್‌ ಖಾಸಗೀಕರಣ ಮಾಡುವುದರಿಂದ ರೈತರ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸುವ ಸಾಧ್ಯತೆ ಇರುತ್ತದೆ. ದೇಶದ ಆಹಾರ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕೂಡ ರೈತರಿಗೆ ಮಾರಕವಾಗಿದೆ. ದಾಸ್ತಾನುದಾರರು ಪೂರ್ಣ ಪ್ರಮಾಣದ ಬೆಳೆಗಳನ್ನು ಖರೀದಿಸುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಈ ತಿದ್ದುಪಡಿಯನ್ನು ಪುನರ್‌ ವಿಮರ್ಶೆ ಮಾಡಿ ರೈತರಿಗೆ ಪೂರಕವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರಾದ ಶಿವಬಸಪ್ಪ ಗೋವಿ, ದೀಪಕ ಗಂಟಿಸಿದ್ದಪ್ಪನವರ, ಸುರೇಶ ಚಲವಾದಿ, ಮಹ್ಮದ್‌ಗೌಸ್‌ ಪಾಟೀಲ್, ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ದಿಳ್ಳೇಪ್ಪ ಮಣ್ಣೂರ, ಕರಬಸಪ್ಪ ಅಗಸಿಬಾಗಿಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.