ADVERTISEMENT

ಎಸ್ಸೆಸ್ಸೆಲ್ಸಿ: ಟಾರ್ಗೆಟ್ ಟಾಪ್ 10

ರಾಜ್ಯಮಟ್ಟದಲ್ಲಿ ಉತ್ತಮ ರ್‍ಯಾಂಕ್ ಜೊತೆಗೆ ಗುಣಮಟ್ಟದ ಫಲಿತಾಂಶ ಪಡೆಯುವುದು ನಮ್ಮ ಗುರಿ: ಡಿಡಿಪಿಐ

ಹರ್ಷವರ್ಧನ ಪಿ.ಆರ್.
Published 19 ಮಾರ್ಚ್ 2019, 13:20 IST
Last Updated 19 ಮಾರ್ಚ್ 2019, 13:20 IST
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರುತ್ತಿರುವ ವಿದ್ಯಾರ್ಥಿಗಳು –ಸಾಂದರ್ಭಿಕ ಚಿತ್ರ 
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬರುತ್ತಿರುವ ವಿದ್ಯಾರ್ಥಿಗಳು –ಸಾಂದರ್ಭಿಕ ಚಿತ್ರ    

ಹಾವೇರಿ:ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಬಾರಿ ‘ಟಾಪ್‌10’ ಒಳಗೆರ್‍ಯಾಂಕ್‌ ಪಡೆಯುವ ಗುರಿಯನ್ನು ಜಿಲ್ಲೆ ಹೊಂದಿದೆ.

ಮಾ.21ರಿಂದ ಏ.4ರ ತನಕ ಪರೀಕ್ಷೆ ನಡೆಯಲಿದ್ದು, ಈ ಬಾರಿ ‘ಟಾಪ್ 10’ ಒಳಗಿನ ರ್‍ಯಾಂಕ್‌ ಪಡೆಯಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ಅದಕ್ಕಾಗಿ ಶೈಕ್ಷಣಿಕ ವರ್ಷದ ಆರಂಭದ ಜೂನ್‌ನಿಂದಲೇ ತಯಾರಿ ಮಾಡಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇವಲ ಟಾಪ್‌ 10 ಒಳಗಿನ ರ್‍ಯಾಂಕಿಂಗ್‌ ಮಾತ್ರವಲ್ಲ, ಉತ್ತಮ ಫಲಿತಾಂಶ ಪಡೆಯುವುದೂ ನಮ್ಮ ಗುರಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಬೇಕು. ಈ ರೀತಿಯಾಗಿ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸತತ ಪ್ರಯತ್ನ ಪಟ್ಟಿದ್ದೇವೆ ಎಂದು ವಿವರಿಸಿದರು.

ADVERTISEMENT

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯು 20ರೊಳಗಿನ ರ್‍ಯಾಂಕ್‌ ಪಡೆದಿಲ್ಲ. ಹೀಗಾಗಿ, ಈ ಬಾರಿಯ ಗುರಿ ಈಡೇರಿಕೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾಕಷ್ಟು ಪ್ರಯತ್ನ ಬೇಕಾಗಿದೆ.

ಸವಣೂರ ಪಟ್ಟಣದ ಎಸ್‌ಎಸ್‌ಎಫ್‌ಎಸ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಮಾ ಕೆ.ಆರ್‌. ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ವರ್ಷ 621 (ಶೇ 99.36) ಅಂಕ ಪಡೆದಿದ್ದು, ಜಿಲ್ಲೆಯ ಸಾರ್ವಕಾಲಿಕ ಅತ್ಯಧಿಕ ಅಂಕವಾಗಿದೆ.

ಸಿದ್ಧತೆ:ಈ ಹಿಂದಿನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಡಿಡಿಪಿಐ ಹಾಗೂ ಇಲಾಖಾ ಅಧಿಕಾರಿಗಳು ಸಭೆ ನಡೆಸಿದ್ದು, ‘ವೀಕ್ಷಕರ ನೇಮಕ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ವಚ್ಛತೆ, ನೋಂದಣಿ ಸಂಖ್ಯೆ ಹಾಗೂ ಕೊಠಡಿ ಖಾತರಿ ಪಡಿಸಲು ಪ್ರದರ್ಶನ ಫಲಕಗಳು ಹಾಗೂ ಹೆಲ್ಫ್‌ ಡೆಸ್ಕ್, ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ, ಝರಾಕ್ಸ್‌ ಮತ್ತಿತರ ಅಂಗಡಿಗಳು ಬಂದ್ ಮಾಡಿಸುವುದು, ಸಿಬ್ಬಂದಿ ಹಾಜರಾತಿ, ಪರೀಕ್ಷಾ ಮಂಡಳಿ ಮಾರ್ಗಸೂಚಿ ಕುರಿತು ನಿಯೋಜಿತ ಅಧಿಕಾರಿಗಳಿಗೆ ಮಾಹಿತಿ, ಮೂಲ ಸೌಕರ್ಯ ವ್ಯವಸ್ಥೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಜವಾಬ್ದಾರಿ, ಪೊಲೀಸ್ ರಕ್ಷಣೆ, ಪ್ರಶ್ನೆ ಪತ್ರಿಕೆಗೆ ಖಜಾನೆ ಹಾಗೂ ಉತ್ತರ ಪತ್ರಿಕೆಗಳನ್ನು ಇಡಲು ಭದ್ರತಾ ಕೊಠಡಿ, ವಿದ್ಯಾರ್ಥಿಗಳಿಗೆ ಆರೋಗ್ಯ ಸೇವೆಗೆ ವ್ಯವಸ್ಥೆ, ನಕಲು ತಡೆಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಭದ್ರತೆ:ಪ್ರಶ್ನೆಪತ್ರಿಕೆಗಳು ಈಗಾಗಲೇ ಖಜಾನೆಗಳಿಗೆ ಬಂದಿವೆ. ಅಲ್ಲಿಂದ ಪೊಲೀಸ್‌ ಹಾಗೂ ಅಧಿಕಾರಿಗಳ ಬಂದೋಬಸ್ತ್‌ನಲ್ಲಿ ಜಿಪಿಎಸ್ ಹೊಂದಿದ ವಾಹನಗಳ ಮೂಲಕ ಕೇಂದ್ರಗಳಿಗೆ ರವಾನಿಸಲಾಗುವುದು. ಉತ್ತರ ಪತ್ರಿಕೆಗಳನ್ನು ಬಿಗಿ ಭದ್ರತೆಯಲ್ಲಿ ಇಡಲಾಗುವುದು ಎಂದು ಡಿಡಿಪಿಐ ತಿಳಿಸಿದರು.

ಡಿಡಿಪಿಐ, ಡಯಟ್ ಪ್ರಾಚಾರ್ಯರು, ಜಿಲ್ಲಾ ಯೋಜನಾ ಉಪಮನ್ವಯ ಅಧಿಕಾರಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಇಲಾಖೆಯ ಎಸ್.ಜಿ. ಕೋಟಿ ತಿಳಿಸಿದರು.

ಫಲಿತಾಂಶ ಹೆಚ್ಚಳಕ್ಕೆ ಕೈಗೊಂಡ ವಿಭಿನ್ನ ಕಾರ್ಯಕ್ರಮಗಳು:

*ಶಾಲಾವಧಿ ಹೊರತು ಪಡಿಸಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು
*ವಿದ್ಯಾರ್ಥಿ ಮನೆ ಭೇಟಿ, ದೂರವಾಣಿ ಮೂಲಕ ಕಲಿಕೆಯನ್ನು ಖಾತರಿ ಪಡಿಸುವುದು
*ಸರಣಿ ಪರೀಕ್ಷೆಗಳು
*ಶಿಕ್ಷಕರಿಗೆ ವಿಶೇಷ ಕಾರ್ಯಾಗಾರಗಳು
*ಫೋನ್‌ ಇನ್ ಮೂಲಕ ವಿದ್ಯಾರ್ಥಿಗಳ ಕ್ಲಿಷ್ಟತೆ ಪರಿಹಾರ
*ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಮಾರ್ಗದರ್ಶನ
*ಪ್ರಶ್ನೆ ಪತ್ರಿಕೆ ಬಿಡಿಸಿ, ಉತ್ತರ ಬರೆಯುವುದು
*ಬೋಧನೆಯಲ್ಲಿ ತಂತ್ರಜ್ಞಾನ ಬಳಕೆ
*ಪರಿಣಿತ ಶಿಕ್ಷಕರಿಂದ ಅಕ್ಕಪಕ್ಕದ ಶಾಲೆಯಲ್ಲೂ ಬೋಧನೆ
*ಆಸಕ್ತ ಶಾಲೆಗಳಲ್ಲಿ ರಾತ್ರಿ ಬೋಧನೆ
*ಗುಂಪು ಚರ್ಚೆ, ಪರಿಹಾರ ಬೋಧನೆ, ರಸಪ್ರಶ್ನೆ, ಪ್ರಶ್ನೋತ್ತರ ಕಲಾಪ, ಪಠ್ಯದ ವಿಷಯ ಆಧರಿತ ಆಶುಭಾಷಣ, ಚೀಟಿ ಎತ್ತಿ ಉತ್ತರಿಸುವುದು,
*ಗರಿಷ್ಠ ಅಂಕ ಪಡೆದ ಮಕ್ಕಳಿಗೆ ವಿಶೇಷ ಮಾರ್ಗದರ್ಶನ
* ಕೆಲವು ಶಾಲೆಗಳಲ್ಲಿ ರಜಾ ಬೋಧನೆ
*ವಿಶ್ವಾಸ ಕಿರಣ ಹಾಗೂ ವಿಶೇಷ ಬೋಧನೆ
*ಮಕ್ಕಳ ದೈಹಿಕ ಸಾಮರ್ಥ್ಯ, ಏಕಾಗ್ರತೆ ಹೆಚ್ಚಿಸಲು ಯೋಗ, ದೈಹಿಕ ಕಸರತ್ತುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.