ADVERTISEMENT

10 ಗ್ರಾಮೀಣ ಬ್ಯಾಂಕ್ ಶಾಖೆ ಆರಂಭಿಸಿ

ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ: ಸಂಸದ ಶಿವಕುಮಾರ ಉದಾಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:51 IST
Last Updated 3 ಡಿಸೆಂಬರ್ 2022, 15:51 IST
ಹಾನಗಲ್‌ ತಾಲ್ಲೂಕಿನ ಸಮ್ಮಸಗಿ ಗ್ರಾಮ ಪಂಚಾಯಿತಿಯ ಕ್ಲರ್ಕ್‌ ನಾಗಪ್ಪ ಕಲಮಟ್ಲ ಅವರು ಕೋವಿಡ್‌ ಸೇನಾನಿಯಾಗಿ ಕೆಲಸ ಮಾಡುವ ವೇಳೆ ಮೃತಪಟ್ಟಿದ್ದರಿಂದ, ಅವರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ₹10 ಲಕ್ಷ ಮೊತ್ತದ ಚೆಕ್‌ ಅನ್ನು ಸಂಸದ ಶಿವಕುಮಾರ ಉದಾಸಿ ವಿತರಿಸಿದರು. ಸಿಇಒ ಮೊಹಮ್ಮದ್‌ ರೋಶನ್‌ ಇದ್ದಾರೆ 
ಹಾನಗಲ್‌ ತಾಲ್ಲೂಕಿನ ಸಮ್ಮಸಗಿ ಗ್ರಾಮ ಪಂಚಾಯಿತಿಯ ಕ್ಲರ್ಕ್‌ ನಾಗಪ್ಪ ಕಲಮಟ್ಲ ಅವರು ಕೋವಿಡ್‌ ಸೇನಾನಿಯಾಗಿ ಕೆಲಸ ಮಾಡುವ ವೇಳೆ ಮೃತಪಟ್ಟಿದ್ದರಿಂದ, ಅವರ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ₹10 ಲಕ್ಷ ಮೊತ್ತದ ಚೆಕ್‌ ಅನ್ನು ಸಂಸದ ಶಿವಕುಮಾರ ಉದಾಸಿ ವಿತರಿಸಿದರು. ಸಿಇಒ ಮೊಹಮ್ಮದ್‌ ರೋಶನ್‌ ಇದ್ದಾರೆ    

ಹಾವೇರಿ: ಜಿಲ್ಲೆಯಲ್ಲಿ ಹೆಚ್ಚಿನ ವಹಿವಾಟು, ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ತೆರೆಯಲು ವಿವಿಧ ಬ್ಯಾಂಕರ್ಸ್‍ಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಐದು ಸಾವಿರ ಜನರಿಗೆ ಒಂದು ಬ್ಯಾಂಕ್ ಶಾಖೆ ಇರಬೇಕು ಎಂಬುದು ಭಾರತೀಯ ರಿಸರ್ವ್‌ ಬ್ಯಾಂಕಿನ ಮಾರ್ಗಸೂಚಿಯಾಗಿದೆ. 2012ರ ಜನಗಣತಿ ಆಧಾರ ಹಾಗೂ ವಹಿವಾಟಿನ ಆಧಾರದ ಮೇಲೆ ಬ್ಯಾಂಕ್‍ಗಳ ಶಾಖೆಯನ್ನು ತೆರೆಯಬೇಕು. ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 10 ಶಾಖೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು.

ಜನ್‍ಧನ್ ಖಾತೆ, ಡಿಬಿಟಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ಮೇಲೆ ಒತ್ತಡ ಜಾಸ್ತಿಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಆರಂಭ ಹಾಗೂ ಬಿತ್ತನೆ ಸಂದರ್ಭದಲ್ಲಿ ಗ್ರಾಮೀಣರು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಗ್ರಾಮೀಣ ಜನರಿಗೆ ಬ್ಯಾಂಕ್ ವಹಿವಾಟು ನಡೆಸಲು ತೀವ್ರವಾದ ತೊಂದರೆಯಾಗಿರುವ ಕುರಿತಂತೆ ಗಮನ ಸೆಳೆದರು.

ADVERTISEMENT

ರೈತರಿಗೆ ಸಾಲ ನೀಡಿ:

ಕೃಷಿ ಒಳಗೊಂಡಂತೆ ಆದ್ಯತಾ ವಲಯಗಳಿಗೆ ಸಾಲ ನೀಡುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಎಸ್.ಬಿ.ಐ.ಸೇರಿದಂತೆ ಹಲವು ಮುಂಚೂಣಿ ಬ್ಯಾಂಕ್‍ಗಳು ಡಿಪಾಜಿಟ್ ಪಡೆಯುತ್ತವೆ. ಆದರೆ ಸಾಲ ನೀಡುವುದಿಲ್ಲ. ಆರ್.ಬಿ.ಐ. ಗೈಡಲೈನ್ಸ್‌ ಪ್ರಕಾರ ಸಾಲ ನೀಡಬೇಕು. ಸಾಲ ನೀಡುವಾಗ ಸಿಬಿಲ್ ಸ್ಕೋರ್‌ ಪರಿಗಣಿಸಬಾರದು. ಒಟಿಎಸ್ ಆಧಾರದ ಮೇಲೆ ರೈತರಿಗೆ ಸಾಲ ನೀಡಲು ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.

ಶಿಕ್ಷಣ ಸಾಲ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರಾತಿಗೆ ವಿಳಂಬ ಅನುಸರಿಸುತ್ತಿರುವ ದೂರುಗಳು ಕೇಳಿಬರುತ್ತಿವೆ. ಲೈನ್ ಡಿಪಾರ್ಟ್‍ಮೆಂಟ್‍ಗಳ ಅರ್ಜಿಗಳ ಫಾಲೋಪ್‍ಗೆ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಬ್ಯಾಂಕಿನಲ್ಲಿರುವ ಸಾಲ ಮಂಜೂರಾತಿ ಅರ್ಜಿಗಳನ್ನು ತ್ವರಿತ ವಿಲೇವಾರಿಗೆ ಕ್ರಮವಹಿಸುವಂತೆ ಸಲಹೆ ನೀಡಿದರು.

‘ಸೈಬರ್‌ ಕಳ್ಳತನ: ಜಾಗೃತಿ ಮೂಡಿಸಿ’

ನಗದು ರಹಿತ ವಹಿವಾಟಿಗೆ ಆದ್ಯತೆ ನೀಡಬೇಕು. ಈ ಕುರಿತಂತೆ ಜಾಗೃತಿ ಮೂಡಿಸಬೇಕು. ಸೈಬರ್ ಕಳ್ಳತನ, ಸುರಕ್ಷಿತ ವಹಿವಾಟು ಹಾಗೂ ಡಿಜಿಟಲ್ ಕಳ್ಳತನವಾದರೆ ಯಾರಿಗೆ ದೂರು ಕೊಡಬೇಕು. ಎಷ್ಟು ಅವಧಿಯೊಳಗೆ ದೂರು ನೀಡಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಬ್ಯಾಂಕ್ ಆಫ್‌ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಬಿ.ರವಿ, ಆರ್.ಬಿ.ಐ. ಅಧಿಕಾರಿ ಸುಪ್ರಿಯಾ ಬ್ಯಾನರ್ಜಿ ಅವರು ಮಾತನಾಡಿದರು. ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಅಣ್ಣಯ್ಯ ಆರ್ ಅವರು ವಿವಿಧ ಬ್ಯಾಂಕ್‍ಗಳ ಪ್ರಗತಿಯ ಮಾಹಿತಿಯನ್ನು ನೀಡಿದರು. ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌, ಕೆವಿಜಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಭಗವಂತ, ನಬಾರ್ಡ್ ಉಪನಿರ್ದೇಶಕ ಮಹದೇವ ಕೀರ್ತಿ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.