ADVERTISEMENT

‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ಪ್ರಶಸ್ತಿ ಗೆದ್ದ ಪೋರಿ: ಬೆರಗುಗೊಳಿಸುವ ನೆನಪ

ಸಿದ್ದು ಆರ್.ಜಿ.ಹಳ್ಳಿ
Published 12 ಆಗಸ್ಟ್ 2021, 15:58 IST
Last Updated 12 ಆಗಸ್ಟ್ 2021, 15:58 IST
‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ಪ್ರಶಸ್ತಿ ಗೆದ್ದಿರುವ 3 ವರ್ಷದ ಸಿರಿಲಕ್ಷ್ಮಿಯೊಂದಿಗೆ ತಂದೆ ಪ್ರವೀಣ ಮತ್ತು ತಾಯಿ ಪ್ರಿಯಾ ತೋಟದ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ಪ್ರಶಸ್ತಿ ಗೆದ್ದಿರುವ 3 ವರ್ಷದ ಸಿರಿಲಕ್ಷ್ಮಿಯೊಂದಿಗೆ ತಂದೆ ಪ್ರವೀಣ ಮತ್ತು ತಾಯಿ ಪ್ರಿಯಾ ತೋಟದ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ಅಂಬೆಗಾಲು ಇಡುತ್ತಾ, ತೊದಲು ಮಾತನಾಡುವ ವಯಸ್ಸಿನಲ್ಲಿ ಅಸಾಧಾರಣ ಪ್ರತಿಭೆಯ ಮೂಲಕ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದಾಳೆ 3 ವರ್ಷದ ಪೋರಿ ಸಿರಿಲಕ್ಷ್ಮಿ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಬಿಲ್ಲಹಳ್ಳಿ ಗ್ರಾಮದ ಪ್ರವೀಣ ಬತ್ತಿಕೊಪ್ಪದ ಮತ್ತು ಪ್ರಿಯಾ ತೋಟದ ದಂಪತಿಯ ಪುತ್ರಿಯಾಗಿರುವ ಸಿರಿಲಕ್ಷ್ಮಿ ಹರಳು ಹುರಿದಂತೆ ಮಾತನಾಡುತ್ತಾ, ತನ್ನ ಅಗಾಧ ನೆನಪಿನ ಶಕ್ತಿಯಿಂದ ಸುತ್ತಲಿನವರನ್ನು ಬೆರಗುಗೊಳಿಸುತ್ತಾಳೆ.

ಇವರ ತಂದೆ ಪ್ರವೀಣ ಅವರು ಬೆಂಗಳೂರಿನ ಇಎಸ್‌ಐಸಿ ಪಿ.ಜಿ. ಇನ್‌ಸ್ಟಿಟ್ಯೂಟ್‌ನ ಅನಸ್ತೇಷಿಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ತಾಯಿ ಪ್ರಿಯಾ ಅವರು ಬೆಂಗಳೂರಿನ ಓಂ ಸಾಯಿ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ವಿಡಿಯೊ ವೈರಲ್‌:

ಸಿರಿಲಕ್ಷ್ಮಿಯು ದೇವರ ಮನೆಯಲ್ಲಿ ಕುಳಿತು ಮಾಡಿದ ‘ಲಿಂಗಪೂಜೆ’ಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ, ಬರೋಬ್ಬರಿ 10 ಲಕ್ಷ ಮಂದಿ ವೀಕ್ಷಿಸಿ, ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ನಾಡಿನ ಪ್ರಮುಖ ಮಠಗಳಾದ ತರಳಬಾಳು, ಸಿದ್ಧಗಂಗಾ ಹಾಗೂ ಸುತ್ತೂರು ಕ್ಷೇತ್ರಗಳಿಂದ ಪ್ರಶಂಸೆಯೂ ವ್ಯಕ್ತವಾಗಿತ್ತು.

ರಾಜ್ಯ, ರಾಜಧಾನಿ, ಸ್ವಾತಂತ್ರ್ಯ ಹೋರಾಟಗಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಭಾರತದ ಐತಿಹಾಸಿಕ ಸ್ಥಳಗಳು, ಮಹಾನ್‌ ವ್ಯಕ್ತಿಗಳು, ರಾಷ್ಟ್ರೀಯ ಸಂಕೇತಗಳು, ಇಂಗ್ಲಿಷ್‌ ಮತ್ತು ಕನ್ನಡ ವರ್ಣಮಾಲೆ, ಅಂಕಿಗಳು ಸೇರಿದಂತೆ ಸಾಮಾನ್ಯ ಜ್ಞಾನದ 200ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಪಟಪಟನೆ ಸರಿಯಾದ ಉತ್ತರ ನೀಡುತ್ತಾಳೆ. ಇವಳಿಗೆ ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳ ಪರಿಚಯವೂ ಆಗುತ್ತಿದೆ.

ವಚನ ನುಡಿಯುವ ಬಾಲೆ:

ಬಸವಣ್ಣನ ವಚನಗಳು, ಗಣಪತಿ ಶ್ಲೋಕ, ದೇವರನಾಮ, ಪದ್ಯಗಳು, ಜನಗಣಮನ, ವಂದೇ ಮಾತರಂ... ಸೇರಿದಂತೆ ಕ್ಲಿಷ್ಟ ಎನಿಸುವ ಹಲವಾರು ಸಂಗತಿಗಳನ್ನು ಲೀಲಾಜಾಲವಾಗಿ ಹೇಳುತ್ತಾಳೆ. ವಾಹನ, ಹಣ್ಣು, ಪಕ್ಷಿ, ಪ್ರಾಣಿ, ಬಣ್ಣಗಳು ಮುಂತಾದವುಗಳನ್ನು ನಿಖರವಾಗಿ ಗುರುತಿಸಿ ಆಶ್ಚರ್ಯಚಕಿತಗೊಳಿಸುತ್ತಾಳೆ.

ಹಲವು ಪ್ರಶಸ್ತಿಗಳು:

ಜ್ಞಾನದ ಮಹಾಪೂರವೇ ಆಗಿರುವ ಈ ಪುಟ್ಟ ಪೋರಿಯ ಪ್ರತಿಭೆಗೆ ‘ಕರ್ನಾಟಕ ಅಚೀವರ್ಸ್‌ ಬುಕ್‌ ಆಫ್‌ ರೆಕಾರ್ಡ್ಸ್‌’, ‘ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌’ ಮುಂತಾದ ಪ್ರಶಸ್ತಿಗಳು ಮುಡಿಗೇರಿವೆ. ‘ಏಷಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’, ‘ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್‌’ ಮತ್ತು ‘ವರ್ಲ್ಡ್‌ ರೆಕಾರ್ಡ್ಸ್‌ ಯುನಿವರ್ಸಿಟಿ’ ಸಂಸ್ಥೆಗಳ ಸ್ಪರ್ಧೆಗಳಿಗೆ ಸಿರಿಲಕ್ಷ್ಮಿ ಹೆಸರು ನೋಂದಣಿಯಾಗಿದೆ. ಕೋವಿಡ್‌ ಕಾರಣದಿಂದ ಹೊರ ರಾಜ್ಯದಲ್ಲಿ ನಡೆಯುವ ಸ್ಪರ್ಧೆಗಳಿಗೆ ಹೋಗಲು ತೊಡಕಾಗಿದೆ ಎನ್ನುತ್ತಾರೆ ಅವರ ತಂದೆ ಪ್ರವೀಣ.

‘ಬಡವರು, ನಿರ್ಗತಿಕರಿಗೆ ನೆರವು ನೀಡುವ ಮೂಲಕಸಿರಿಲಕ್ಷ್ಮಿಯ ಹುಟ್ಟುಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ನಾವು ಸಿರಿಗೆರೆಯ ತರಳಬಾಳು ಮಠದ ವಾತಾವರಣದಲ್ಲಿ ಬೆಳೆದಿದ್ದು, ಮಗಳಿಗೂ ಕಲೆ, ಸಂಸ್ಕೃತಿ, ನಾಟಕಗಳ ಪರಿಚಯ ಮಾಡುತ್ತಿದ್ದೇವೆ. ಅವರ ಅಜ್ಜಿ ಶಕುಂತಮ್ಮ ಅವರ ಪರಿಶ್ರಮವೂ ಸಿರಿಯ ಸಾಧನೆಗೆ ಕಾರಣವಾಗಿದೆ. ಅವಳ ನೆನಪಿನ ಶಕ್ತಿ ಮತ್ತು ಜ್ಞಾನದ ಮಟ್ಟ ದೇವರ ವರ ಎಂದು ಭಾವಿಸಿದ್ದೇವೆ’ ಎನ್ನುತ್ತಾರೆ ತಾಯಿ ಪ್ರಿಯಾ ತೋಟದ.

ಎಲ್ಲ ಮಕ್ಕಳಲ್ಲೂ ವಿಶೇಷ ಪ್ರತಿಭೆಯಿರುತ್ತದೆ. ನಾವು ಅದನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಪ್ರತಿಭೆ ಅನಾವರಣಗೊಳ್ಳುತ್ತದೆ
– ಪ್ರಿಯಾ ತೋಟದ, ಸಿರಿಲಕ್ಷ್ಮಿ ಅವರ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.