ಹಾವೇರಿ: ಸ್ಕೂಟರ್ ಖರೀದಿ ಸಮಯದಲ್ಲಿ ಹೆಚ್ಚುವರಿ ಹಣ ಪಡೆದು, ರಸೀದಿ ನೀಡದೆ ಸತಾಯಿಸಿದ್ದ ರಾಣೆಬೆನ್ನೂರಿನ ನಿಂಬಾ ಆಟೊಮೊಬೈಲ್ಸ್ ಕಂಪನಿಯಿಂದ ಗ್ರಾಹಕನಿಗೆ ಹೆಚ್ಚುವರಿ ಹಣವನ್ನು ದಂಡ ಸಮೇತ ವಾಪಸ್ ಕೊಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯವು ಈಚೆಗೆ ಆದೇಶ ನೀಡಿದೆ.
ರಾಣೆಬೆನ್ನೂರು ತಾಲ್ಲೂಕು ಕೋಟಿಹಾಳ ಗದಿಗಯ್ಯ ಕಬ್ಬಿಣಕಂತಿಮಠ ಅವರು ನಿಂಬಾ ಆಟೊಮೊಬೈಲ್ಸ್ ಕಂಪನಿಯಲ್ಲಿ 2019ರ ಡಿಸೆಂಬರ್‌ನಲ್ಲಿ ₹55,500 ಮುಂಗಡ ಹಣ ನೀಡಿ ಸ್ಕೂಟರ್ ಖರೀದಿಸಿದ್ದರು. ನಿಖರ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಡೆದ ಬಗ್ಗೆ ಮತ್ತು ರಸೀದಿ ನೀಡದ ಬಗ್ಗೆ ಆಟೊಮೊಬೈಲ್ಸ್ ಕಂಪನಿಯವರು ಸಮರ್ಪಕ ಉತ್ತರ ನೀಡದ ಕಾರಣ, ಕೋಟಿಹಾಳ ಅವರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ದೂರುದಾರರ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಹೆಚ್ಚುವರಿ ಹಣ ₹6,008 ಮತ್ತು ಶೇ 6ರ ಬಡ್ಡಿಯೊಂದಿಗೆ ಗ್ರಾಹಕನಿಗೆ ಮರಳಿ ಕೊಡಬೇಕು. ದೈಹಿಕ ಮತ್ತು ಮಾನಸಿಕ ಹಿಂಸೆಗೆ ₹10 ಸಾವಿರ ಹಾಗೂ ದಾವೆಯ ಖರ್ಚಿಗಾಗಿ ₹1 ಸಾವಿರ ಕೊಡಬೇಕು ಎಂದು ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.