ADVERTISEMENT

ಶಿಗ್ಗಾವಿ: ರಾಣಿ ಚನ್ನಮ್ಮ ಮೂರ್ತಿ ಭವ್ಯ ಮೆರವಣಿಗೆ

ಗಮನ ಸೆಳೆದ ಕಲಾತಂಡಗಳ ಮೆರವಣಿಗೆ, ಝಾಂಜ್ ಮೇಳ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:44 IST
Last Updated 30 ಆಗಸ್ಟ್ 2021, 15:44 IST
ಶಿಗ್ಗಾವಿ ಪಟ್ಟಣದಲ್ಲಿ ಸೋಮವಾರ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆಗೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಚಾಲನೆ ನೀಡಿದರು
ಶಿಗ್ಗಾವಿ ಪಟ್ಟಣದಲ್ಲಿ ಸೋಮವಾರ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆಗೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಚಾಲನೆ ನೀಡಿದರು   

ಶಿಗ್ಗಾವಿ: ವೀರ ರಾಣಿ ಕಿತ್ತೂರ ಚನ್ನಮ್ಮ ಮೂರ್ತಿ ಮೆರವಣಿಗೆ ಸೋಮವಾರ ಅದ್ಧೂರಿಯಾಗಿ ನಡೆಯಿತು. ಪಂಚಮಸಾಲಿ ಸಮಾಜದವರು ಮತ್ತು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತಾಲ್ಲೂಕಿನ ಗೊಟಗೋಡಿ ರಾಕ್ ಗಾರ್ಡನ್‌ನಿಂದ ಹೊರಟ ಮೆರವಣಿಗೆಗೆ ಪಟ್ಟಣದ ಗಂಗೇಭಾವಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಹತ್ತಿರ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪುಷ್ಪ ಅರ್ಪಿಸಿ, ಬೃಹದಾಕಾರದ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಕುಂಭಮೇಳ, ಮಹಿಳೆಯರ ಝಾಂಜ್ ಮೇಳ, ಯುವಕರ ಝಾಂಜ್ ಮೇಳ, ಕುದುರೆ ಕುಣಿತ, ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಹರ, ಹರ ಮಹಾದೇವ ಎಂಬ ಘೋಷಣೆ ಮೊಳಗಿವು. ಕಹಳೆ ತಂಡ, ಬೈಕ್‌ನಲ್ಲಿ ಸಾಗಿದ ಯುವಕರ ತಂಡಮೆರವಣಿಗೆಯ ಮೆರುಗು ಹೆಚ್ಚಿಸಿದವು. ಫಿರಂಗಿ ದಳದ ವೇಷಧಾರಿಗಳು ಅಣುಕು ಪ್ರದರ್ಶನ ನೀಡಿ ಗಮನ ಸೆಳೆದರು.

ADVERTISEMENT

ಪಟ್ಟಣದಲ್ಲಿ ಕಿತ್ತೂರ ಚನ್ನಮ್ಮನ ಮೂರ್ತಿ ಮೆರವಣಿಗೆ ಸ್ವಾಗತಕ್ಕಾಗಿ ಪ್ರತಿ ಬೀದಿಗಳಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲಾಗಿತು. ಮಾವಿನ ಮತ್ತು ಬಣ್ಣದ ಹಾಳೆಗಳ ತಳಿರು ತೋರಣಗಳಿಂದ ಅಲಂಕರಿಸಿದ್ದರು. ಮನೆ, ಮನೆಗಳ ಅಂಗಳದಲ್ಲಿ ಬಣ್ಣ,ಬಣ್ಣದ ರಂಗೋಲಿಗಳನ್ನು ಹಾಕಿ ಸ್ವಾಗತ ಕೋರಲಾಗಿತು. ದಾವಣಗೆರೆ ಬಿ.ಎಸ್.ಚನ್ನಬಸಪ್ಪ ಜವಳಿ ಮಳಿಗೆಯ ಉಮಾಪತಿ, ಶ್ರೀಕಾಂತ ದುಂಡಿಗೌಡ್ರ, ಚಂದ್ರಶೇಖರ ಪೂಜಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ, ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬಾಗೂರ ಸೇರಿದಂತೆ ಅನೇಕ ಗಣ್ಯರು ಬಂದು ಪುಷ್ಪ, ಹೂಮಾಲೆಗಳನ್ನು ಹಾಕಿ ಗೌರವ ಸಲ್ಲಿದರು.

ಗಂಗೇಭಾವಿ ಕ್ರಾಸ್‌ದಿಂದ ಆರಂಭವಾದ ಮೆರವಣಿಗೆ ಅಂಚೆ ಕಚೇರಿ, ಹಳೆ ಬಸ್ ನಿಲ್ದಾಣ, ಮೈಲಾರ ದೇವಸ್ಥಾನ, ಕಾರಿಕಂಠಿ ಬಸವಣ್ಣ ದೇವಸ್ಥಾನ, ದೇಸಾಯಿ ಓಣಿ,
ಹಳಪೇಟೆ, ಜೋಳದ ಪೇಟೆ, ಪೇಟೆ ಮುಖ್ಯ ರಸ್ತೆ, ಸಂತೆ ಮೈದಾನ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಬಂದ ನಂತರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಅಕ್ಟೋಬರ್ 23ರಂದು ಚನ್ನಮ್ಮ ಜಯಂತ್ಯುತ್ಸವ ದಿನದಂದು ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.

ಸಣ್ಣಪ್ಪ ಬುಳ್ಳಕ್ಕನವರ, ಗಂಗಣ್ಣ ಸಾತಣ್ಣವರ, ಉಮೇಶ ಗೌಳಿ, ವೀರೇಶ ಆಜೂರ, ಶಿವಾನಂದ ಮ್ಯಾಗೇರಿ, ಸಿದ್ದಾರ್ಥಗೌಡ ಪಾಟೀಲ, ಅಶೋಕ ಬಂಕಾಪುರ, ಗಂಗೇಭಾವಿ ಶಶಿಧರ ಯಲಿಗಾರ, ಕೊಟ್ರೇಪ್ಪ ನಡೂರ,
ಸತೀಶ ಯಲಿಗಾರ, ಬಸವರಾಜ ರಾಗಿ, ವೀರಣ್ಣ ಬಡ್ಡಿ, ಉಮೇಶ ಅಂಗಡಿ, ಪ್ರೇಮಾ ಪಾಟೀಲ, ತಿಪ್ಪಣ್ಣ ಸಾತಣ್ಣವರ, ನಿಂಗಪ್ಪ ಹರಿಜನ, ಶ್ರೀಕಾಂತ ಪೂಜಾರ, ರಮೇಶ ವನಹಳ್ಳಿ, ವಸಂತಾ ಬಾಗೂರ ಸೇರಿದಂತೆ ಪುರಸಭೆ, ತಾ.ಪಂಸದಸ್ಯರು, ವಿವಿಧ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.