ADVERTISEMENT

ಪ್ರಜ್ಞಾವಂತ ಮತದಾರರ ಚಿತ್ತ ಕಾಂಗ್ರೆಸ್‌ನತ್ತ: ಎಚ್‌.ಕೆ.ಪಾಟೀಲ

ಕುಬೇರಪ್ಪ ಗೆದ್ದರೆ ನನಗೆ ರಾಜಕೀಯ ಬಲ: ಶಾಸಕ ಎಚ್‌.ಕೆ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 11:07 IST
Last Updated 23 ಅಕ್ಟೋಬರ್ 2020, 11:07 IST
ಎಚ್‌.ಕೆ.ಪಾಟೀಲ, ಶಾಸಕ 
ಎಚ್‌.ಕೆ.ಪಾಟೀಲ, ಶಾಸಕ    

ಹಾವೇರಿ: ‘ರಾಜ್ಯದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ, ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ, ರೈತ ವಿರೋಧಿ ಮಸೂದೆಗಳು ಮುಂತಾದ ಕಾರಣಗಳಿಂದ ಬೇಸತ್ತ ಪ್ರಜ್ಞಾವಂತ ಮತದಾರರು, ಈ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಶ್ಚಿಮ ಪದವೀಧರರ ಕ್ಷೇತ್ರ ನನಗೆ ಪ್ರಿಯವಾದ ಕ್ಷೇತ್ರ. 25 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ, ಸಭಾ ನಾಯಕ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸುವ ಸೌಭಾಗ್ಯ ನೀಡಿದೆ. ಹೀಗಾಗಿ ಈ ಕ್ಷೇತ್ರದ ಗೆಲುವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಕುಬೇರಪ್ಪ ಗೆದ್ದರೆ ನನಗೆ ರಾಜಕೀಯ ಬಲ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ರೈತ ಮಸೂದೆಗಳ ತಿದ್ದುಪಡಿ ಸಂದರ್ಭ ‘ಧ್ವನಿ ಮತ’ ಕೇಳಿದಾಗ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಮತ ಹಾಕಲು ಅನುಮತಿ ಕೋರಿದವು. ಆದರೆ, ಇದನ್ನು ಬಿಜೆಪಿ ನಿರಾಕರಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿತು. ಸಂಸದೀಯ ವ್ಯವಸ್ಥೆಗೆ ಅಪಮಾನ ಮಾಡಿತು. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ರೈತ ಮಸೂದೆಗಳಿಗೆ ತಿದ್ದುಪಡಿ ತರಲಾಗಿದೆ ಎಂದು ಕಿಡಿಕಾರಿದರು.

ADVERTISEMENT

ನರೇಂದ್ರ ಮೋದಿಯವರು ಕೊಟ್ಟ ಮಾತಿನಂತೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಅದರ ಬದಲು ಉದ್ಯೋಗ ನಷ್ಟವಾಗುವಂತೆ ಮಾಡಿದರು. ₹15 ಲಕ್ಷವನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿಲ್ಲ. ನೋಟು ಅಮಾನ್ಯೀಕರಣದ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಸ್ವಿಸ್‌ ಬ್ಯಾಂಕ್‌ನಿಂದ ಕಪ್ಪು ಹಣ ತರಲಿಲ್ಲ ಎಂದು ಟೀಕಿಸಿದರು.

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಲ್ಲ, ಬೆಂಬಲ ಬೆಲೆ ಘೋಷಣೆ ಮಾಡಿಲ್ಲ, ಖರೀದಿ ಕೇಂದ್ರ ತೆರೆದಿಲ್ಲ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಸಚಿವರ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಭದ್ರಕೋಟೆ ಎನಿಸಿರುವ ಹಾವೇರಿಯಲ್ಲೂ ‘ಹಸ್ತ’ಕ್ಕೆ ಬೆಂಬಲ ಸಿಗಲಿದೆ ಎಂದರು.

ಲಸಿಕೆಯ ಆಮಿಷ: ತನಿಖೆಗೆ ಆಗ್ರಹ

‘ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಪೂರೈಸಲಾಗುವುದು ಎಂದು ಭರವಸೆ ನೀಡುವ ಮೂಲಕ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆರೋಪಿಸಿದರು.

‘ಕೋವಿಡ್‌ ಲಸಿಕೆ ಉಚಿತವಾಗಿ ಎಲ್ಲರಿಗೂ ಸಿಗಬೇಕು. ಇದರಲ್ಲೂ ತಾರತಮ್ಯ ಮಾಡುವುದು ನಾಚಿಕೆಗೇಡಿತನ ಸಂಗತಿ. ಚುನಾವಣಾ ಪ್ರಚಾರದಲ್ಲಿ ಲಸಿಕೆಯ ಆಸೆ–ಆಮಿಷ ತೋರುತ್ತಿರುವ ಬಗ್ಗೆ ಚುನಾವಣಾ ಆಯೋಗ ನೋಟಿಸ್‌ ಕೊಟ್ಟು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಹಾಥರಸ್‌ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಮೊಳಗಿದ ಧ್ವನಿಗಳನ್ನು ಅಡಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಅಪರಾಧಿಗಳನ್ನು ಬಂಧಿಸುವಲ್ಲಿ ದಿಟ್ಟತನ ತೋರಲಿಲ್ಲ. ಲೈಂಗಿಕ ದೌಜನ್ಯ ಪ್ರಕರಣಗಲ್ಲಿ ನೊಂದವರ ಧ್ವನಿಯನ್ನೂ ಅಡಗಿಸುವ ಕೆಲಸವನ್ನುಮೊಟ್ಟ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಆರ್‌.ಎಂ. ಕುಬೇರಪ್ಪ, ಜಿ.ಪಂ. ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.