ADVERTISEMENT

ಐತಿಹಾಸಿಕ ದೇವಾಲಯಗಳ ಸ್ವರ್ಗ ಕಲಕೇರಿ

ಸರ್ವಧರ್ಮಗಳ ಸಮನ್ವಯತೆ ಸಾರುವ ಗ್ರಾಮ: ಯುಗಾದಿ ಸಂದರ್ಭ ಲಿಂಗದ ಮೇಲೆ ಸೂರ್ಯರಶ್ಮಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:30 IST
Last Updated 16 ಅಕ್ಟೋಬರ್ 2021, 19:30 IST
ತಿಳವಳ್ಳಿ ಸಮೀಪದ ಕಲಕೇರಿ ಗ್ರಾಮದ 11ನೇ ಶತಮಾನದ ಸೋಮೇಶ್ವರ ದೇವಾಲಯ
ತಿಳವಳ್ಳಿ ಸಮೀಪದ ಕಲಕೇರಿ ಗ್ರಾಮದ 11ನೇ ಶತಮಾನದ ಸೋಮೇಶ್ವರ ದೇವಾಲಯ   

ತಿಳವಳ್ಳಿ: ಹಾನಗಲ್‌ ತಾಲ್ಲೂಕಿನ ಕಲಕೇರಿ ಗ್ರಾಮ ಗತಕಾಲದ ವೈಭವವನ್ನು ಸರ್ವಕಾಲಕ್ಕೂ ಸಾರುವಂತಿದೆ. ಕಲಕೇರಿ ಗ್ರಾಮಕ್ಕೆ ಆ ಗ್ರಾಮದಲ್ಲಿರುವ ಕಲ್ಲಿನಿಂದ ಕಟ್ಟಲ್ಪಟ್ಟ ಕೆರೆಯಿಂದಾಗಿ ಆ ಹೆಸರು ಪ್ರಾಪ್ತವಾಗಿದೆ.

ಅಲ್ಲಿಯ ಶಾಸನಗಳಲ್ಲಿ ಕಲ್ಕೆರೆ, ಕಲುಕೆರೆ, ಕಲಿಕೆರೆ ಎಂದು ಮುಂತಾಗಿ ಕರೆಯಲಾಗಿದೆ. ಕಲಕೇರಿಯ ಜನರು ‘ನಮ್ಮ ಊರಲ್ಲಿ ಕಲಿಗಳೇ ಇದ್ದರು’ ಹಾಗಾಗಿ ಕಲಿಗಳ ಕೇರಿಯಿಂದಾಗಿ ಕಲಿಕೇರಿ, ಕಲಕೇರಿ ಎಂಬ ಹೆಸರು ಬಂದಿದೆಯೆಂದು ತಿಳಿಸಿ ಅಲ್ಲಿಯ ವೀರಗಲ್ಲುಗಳನ್ನು ಹೆಮ್ಮೆಯಿಂದ ತೋರಿಸುತ್ತಾರೆ.

ಕಲಕೇರಿ ಗ್ರಾಮವು ಹಿಂದೆ ಒಂದು ಪ್ರಮುಖ ಪಟ್ಟಣವಾಗಿ ಪ್ರಸಿದ್ಧಿ ಪಡೆದಿತ್ತು. ಕೋಟೆಕೊತ್ತಲಗಳಿಂದ ಹಲವಾರು ದೇವಾಲಯಗಳನ್ನು ಹೊಂದಿದೆ. ಕೆರೆ ಸೋಮೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಬಸವಣ್ಣ ದೇವಾಲಯ, ಲಕ್ಷ್ಮೀ ಗುಡಿ, ಬನಶಂಕರಿ ಗುಡಿ, ದ್ಯಾಮವ್ವನ ಗುಡಿ, ವೀರಭದ್ರ ದೇವಾಲಯ, ಕಲಿಯಮೇಶ್ವರ ದೇವಾಲಯ, ಆಂಜನೇಯ ದೇವಾಲಯ, ಬ್ರಹ್ಮ ದೇವರ ಗುಡಿ, ಬುದ್ಧ ವಿಹಾರ ಹಾಗೂ ಜಿನಾಲಯಗಳು ಇರುವುದು ಸರ್ವಧರ್ಮ ಸಮನ್ವಯತೆಯನ್ನು ಕಾಣಬಹುದಾಗಿದೆ.

ADVERTISEMENT

ಜಾಲ ರಂಧ್ರಗಳನ್ನು ಜೋಡಿಸಿರುವುದು ಸೋಮೇಶ್ವರ ದೇವಾಲಯಕ್ಕೆ ಶೋಭೆಯನ್ನು ತಂದಿದೆ. ರಂಗ ಮಂಟಪದಲ್ಲಿನ ಕಂಬಗಳ ಕೆತ್ತನೆಯೂ ಮೋಹಕವಾದುದಾಗಿದೆ. ಲಿಂಗದ ಎದುರು ನಂದಿ ಇದ್ದು, ಅದು ಸ್ವಲ್ಪ ಭಗ್ನಗೊಂಡಿದೆ. ದೇವಾಲಯದ ಪಕ್ಕ ಹೊಂಡವಿದ್ದು, ಅದು ದೇವಾಲಯದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಸೋಮೇಶ್ವರ ದೇವರ ಲಿಂಗದ ಮೇಲೆ ಯುಗಾದಿ ಹಬ್ಬದಂದು ಸೂರ್ಯನ ಕಿರಣಗಳು ಲಿಂಗದ ಮೇಲೆ ಬೀಳುತ್ತವೆ.

ಸೋಮೇಶ್ವರ ದೇವಾಲಯಕ್ಕೆ ನೊಳಂಬವಾಡಿ 32000ವನ್ನು ಆಳುತ್ತಿದ್ದ, ಮಹಾಮಂಡಳೇಶ್ವರ ಮದ್ಭುವನೈಕ ಮಲ್ಲ ವೀರನೊಳಂಬ ಪಲ್ಲವ ಉದಯಾದಿತ್ಯನು ತನ್ನ ಮಹಾರಾಣಿಯಾದ ಮಾಳಲದೇವಿಯೊಂದಿಗೆ ಆಗಮಿಸಿ ಸೋಮೇಶ್ವರ ದರ್ಶನ ಪಡೆದು ಕೃತಾರ್ಥರಾದರು ಎಂದು ಇಲ್ಲಿಯ ಶಾಸನಗಳು ತಿಳಿಸುತ್ತವೆ.

ಈ ದೇವಾಲದಲ್ಲಿ ಆದಿತ್ಯ ದೇವಾಲಯ, ನಾಗಾಲಯ, ವಿಷ್ಣು ಗೃಹಗಳಿವೆ. ಶಿವನ ಎದುರಿಗೆ ನಂದಿಯ ಹಿಂದೆ ಸುಂದರವಾದ ಆದಿತ್ಯ ದೇವರ ಮೂರ್ತಿಯಿದೆ ಇದು ಆದಿತ್ಯಾಲಯ. ಶಿವನ ಮುಂದೆ ಬಲಕ್ಕೆ ರಂಗಮಂಟಪಕ್ಕೆ ಹೊಂದಿಕೊಂಡಂತೆ ನಾಗಾಲಾಯವಿದೆ. ಇದರಲ್ಲಿ ಸ್ತ್ರೀ ಪುರುಷ ನಾಗ ದೇವತೆಯನ್ನು ಕೆತ್ತಿದ ವಿಗ್ರಹವಿದೆ. ತಲೆಯನ್ನು ಮಾತ್ರ ಮಾನವರಂತೆ ಕೆತ್ತಿದ್ದು, ಕೆಳಗಿನ ಭಾಗ ಹಾವನ್ನು ಹೋಲುತ್ತದೆ.

ಐತಿಹಾಸಿಕ ಸ್ಮಾರಕ ಸಂರಕ್ಷಣೆಗಾಗಿ ಕಲಕೇರಿ ಕುರಿತು ಸಂಶೋಧನೆ ಕೈಗೊಳ್ಳುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ಇದರ ಮೂಲಕ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗಡೆಯವರು ಭೇಟಿ ಕೊಟ್ಟು ಜೀರ್ಣೋದ್ಧಾರದಲ್ಲಿ ಭಾಗಿಯಾಗಿದ್ದರು. ಪ್ರತಿ ವರ್ಷ ಮಕರ ಸಂಕ್ರಾತಿಯ ಉತ್ತರಾಯಣ ಕಾಲದಂದು ಆದಿತ್ಯಾ ದೇವರಿಗೆ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಅಭಿಷೇಕ ಮಾಡುತ್ತಾರೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ಬಸವೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗುತ್ತದೆ.

ಸೋಮೇಶ್ವರ ದೇವಾಲಯವು ಪುರಾತತ್ವ ಇಲಾಖೆಗೆ ಒಳಪಟ್ಟಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರಾಚ್ಯವಸ್ತು ಇಲಾಖೆಯ ಮೂಲಕ ಅಭಿವೃದ್ಧಿಗೊಳಿಸಬೇಕು. ಪೂರಕವಾಗಿ ಸಂಬಂಧಿಸಿದ ಸ್ಥಳೀಯ ಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದು ಪ್ರವಾಸಿ ತಾಣ ಮಾಡಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.