ADVERTISEMENT

ಕೊಕ್ಕೊ ಕ್ರೀಡೆಯಲ್ಲಿ ಮಿಂಚಿದ ಮತ್ತೂರು

ಪ್ರಾಚೀನ ಕಲ್ಮೇಶ್ವರ ದೇಗುಲ ಜೀರ್ಣೋದ್ಧಾರ: ಚಾಲುಕ್ಯರ ಶೈಲಿಯ ನವರಂಗದ ಕಂಬಗಳು

ಪ್ರಮೀಳಾ ಹುನಗುಂದ
Published 24 ಜುಲೈ 2022, 5:07 IST
Last Updated 24 ಜುಲೈ 2022, 5:07 IST
ಬ್ಯಾಡಗಿ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಕ್ರಿ.ಶ 10ನೇ ಶತಮಾನದಲ್ಲಿ ರಚನೆಯಾದ ಕಲ್ಮೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದೆ
ಬ್ಯಾಡಗಿ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಕ್ರಿ.ಶ 10ನೇ ಶತಮಾನದಲ್ಲಿ ರಚನೆಯಾದ ಕಲ್ಮೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದೆ   

ಬ್ಯಾಡಗಿ: ತಾಲ್ಲೂಕಿನ ಮತ್ತೂರು ಗ್ರಾಮವನ್ನು ಈ ಹಿಂದೆ ‘ಮುತ್ತೂರು‘ ಎಂದು ಕರೆಯಲಾಗುತ್ತಿತ್ತು ಎಂದು ಪ್ರಾಚೀನ ಶಾಸನಗಳಲ್ಲಿ ಉಲ್ಲೇಖವಿದೆ.

ತಾಲ್ಲೂಕಿನ 21ನೇ ಪಂಚಾಯ್ತಿಯಾಗಿ ಅಸ್ತಿತ್ವಕ್ಕೆ ಬಂದಿದ್ದು, ದೂಳಿಕೊಪ್ಪ ಹಾಗೂ ಮತ್ತೂರ ಗ್ರಾಮಗಳನ್ನು ಒಳಗೊಂಡ ಚಿಕ್ಕ ಗ್ರಾಮ ಪಂಚಾಯ್ತಿಯಾಗಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ಇಲ್ಲಿಯ ಮಕ್ಕಳು ಕೊಕ್ಕೊ ಕ್ರೀಡೆಯಲ್ಲಿ ವಿಭಾಗ ಮಟ್ಟ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ. ಪ್ರೌಢಶಾಲಾ ಬಾಲಕರು ವಿಭಾಗ ಮಟ್ಟದವರೆಗೆ ತಲುಪಿದ್ದರೆ, ಪ್ರಾಥಮಿಕ ಶಾಲಾ ಬಾಲಕಿಯರು ರಾಜ್ಯಮಟ್ಟದವರೆಗೂ ಆಡಿದ್ದಾರೆ.

ಕದಂಬ ಅರಸರ ವಿಜಯಶಿವ ಮಾಂಧಾತೃವರ್ಮನ ಆಳ್ವಿಕೆಯ 13ನೇ ವರ್ಷದಲ್ಲಿ ನೀಡಿರುವ ತಾಮ್ರ ಶಾಸನ ಈಚೆಗೆ ಪತ್ತೆಯಾಗಿದೆ ಎಂದು ಡಾ.ದೇವರಕೊಂಡಾರೆಡ್ಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿರುವ ಉಲ್ಲೇಖವಿದೆ.

ADVERTISEMENT

ಇನ್ನೊಂದು ದಾನ ಶಾಸನದಲ್ಲಿ 20 ನಿವರ್ತನ ಹಲ ಕ್ಷೇತ್ರವನ್ನು ದಾನ ಕೊಟ್ಟ ವಿಷಯ ಪ್ರಸ್ತಾಪಿಸಿದೆ. ಗ್ರಾಮದಲ್ಲಿ ಕ್ರಿ.ಶ 10ನೇ ಶತಮಾನದಲ್ಲಿ ಕಲ್ಮೇಶ್ವರ ಗುಡಿ ರಚನೆಯಾಗಿದ್ದು, ಮೂರು ಗರ್ಭ ಗೃಹಗಳನ್ನು ಹೊಂದಿರುವ ಈ ತ್ರಿಕೂಟದ ಪ್ರಧಾನ ಗರ್ಭಗೃಹಕ್ಕೆ ತೆರೆದ ಅರ್ಧ ಮಂಟಪವಿದೆ. ದಕ್ಷಿಣದಲ್ಲಿ 5 ಅಡಿ ಎತ್ತರದ ಆದಿತ್ಯ ಹಾಗೂ ವಿಷ್ಣುವಿನ ಮೂರ್ತಿಗಳಿವೆ.

ನವರಂಗದಲ್ಲಿನ 5 ಕೋಷ್ಠಗಳಲ್ಲಿ 2 ಅಡಿ ಎತ್ತರದ ಸಪ್ತ ಮಾತೃಕಾ ಶಿವಲಿಂಗ, ಉಮಾ ಮಹೇಶ್ವರ, ಭೈರವ ಹಾಗೂ ಮಹಿಷಮರ್ಧಿನಿಯರ ಶಿಲ್ಪಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ನವರಂಗದ ಕಂಬಗಳು ಚಾಲುಕ್ಯರ ಶೈಲಿಯಲ್ಲಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯನ್ನು ಸ್ಥಾಪಿಸಲಾಗಿದೆ. ದೇವಸ್ಥಾನದ ಎದುರಿಗೆ 12 ವೀರಗಲ್ಲು ಹಾಗೂ ಮಾಸ್ತಿಕಲ್ಲು ನಿಂತಿವೆ ಎಂದು ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಸಿ.ಬಿ. ಪಾಟೀಲ ಹೇಳಿದರು.

ಸರ್ವ ಧರ್ಮ ಸಹಿಷ್ಣುತೆಯನ್ನು ಸಾರುವ ಗ್ರಾಮದಲ್ಲಿ ದ್ಯಾಮವ್ವ, ಹನುಮಂತ, ಕರಿಯಮ್ಮ, ಎಲ್ಲಮ್ಮ ಹಾಗೂ ದುಂಡಿ ಬಸವೇಶ್ವರ ಸೇರಿದಂತೆ ಮಸೀದಿ ಮತ್ತು ದರ್ಗಾಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.