ಚನ್ನರಾಯಪಟ್ಟಣ: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಬಳಕೆ ಸಲ್ಲದು ಎಂದು ಪರಿಸರವಾದಿ ಸಿ.ಎನ್. ಅಶೋಕ್ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಸ್ಯಶಾಸ್ತ್ರ, ಭೂಗೋಳಶಾಸ್ತ್ರ, ರೆಡ್ ಕ್ರಾಸ್ ಘಟಕ ಹಾಗು ಐಕ್ಯುಎಸಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮತನಾಡಿದರು. ಭೂಮಿಯಲ್ಲಿ ಹಲವು ವರ್ಷಗಳ ತನಕ ಪ್ಲಾಸ್ಟಿಕ್ ಕರಗುವುದಿಲ್ಲ. ಮನುಕುಲದ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರ ಸ್ನೇಹಿಯಾದ ಬಟ್ಟೆಬ್ಯಾಗ್ ಉಪಯೋಗಿಸಬೇಕು. ಪ್ರಕೃತಿ ಮನುಷ್ಯನ ಆಸೆಯನ್ನು ಈಡೇರಿಸುತ್ತದೆಯೇ ಹೊರತು ದುರಾಸೆಯನ್ನಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿವರ್ಷ ಭೂಮಿಉಳಿಸಿ ಆಂದೋಲನಾ ಸಮಿತಿ ವತಿಯಿಂದ ಉಚಿತವಾಗಿ ಗಿಡಗಳನ್ನು ವಿತರಿಸಲಾಗುತ್ತದೆ. ಹಸಿರು ಹಬ್ಬ ಆಚರಿಸುವ ಮೂಲಕ ಶಾಲಾ, ಕಾಲೇಜುಗಳ ಆವರಣದಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ತರವಲ್ಲ. ಭವಿಷ್ಯದ ಜನಾಂಗದ ದೃಷ್ಟಿಯಿಂದ ಉತ್ತಮ ಗಾಳಿ, ನೀರನ್ನು ಉಳಿಸಬೇಕಿದೆ. ಗಿಡನೆಟ್ಟು ಪೋಷಿಸುವ ಗುಣವನ್ನು ಎಲ್ಲರು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಂಡ್ಯದ ಗ್ಲೋಬಲ್ ಮಹೇಶ್ ಪಿಯು ಕಾಲೇಜು ಉಪನ್ಯಾಸಕ ರವಿಕಿರಣ್ ಮಾತನಾಡಿ, ಅರಣ್ಯ ಸಂಪತ್ತಿನಿಂದ ದೇಶ ಪ್ರಗತಿಪಥದತ್ತ ಸಾಗುತ್ತದೆ. ಪರಿಸರ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಔಷಧಿ ಗುಣ ಇರುವ ಸಸಿಗಳನ್ನು ನೆಡಬೇಕು ಎಂದರು. ಪರಿಸರ ಮಹತ್ವ ಕುರಿತು ಗೀತೆ ಹಾಡಿ ರಂಜಿಸಿದರು.
ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ ಮಾತನಾಡಿ, ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ. ವರ್ಷದ ಎಲ್ಲಾ ದಿನಗಳಲ್ಲಿ ಪರಿಸರವನ್ನು ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಂ. ನಿರುಪಮಾ, ಸಿ.ವಿ. ಸೌಮ್ಯಾ, ಕೆ.ಬಿ. ಪಾರ್ವತಮ್ಮ, ನಳಿನಾ, ಪರಿಸರವಾದಿಗಳಾದ ಸಚಿನ್, ಎಚ್.ವಿ. ಸಿದ್ದೇಶ್ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಸಿ.ಎಸ್. ಪ್ರೇಕ್ಷಾ, ಲಾವಣ್ಯಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.