ಬ್ಯಾಡಗಿ: ಇಲ್ಲಿಯ ಛತ್ರ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮುಸುಕುಧಾರಿ ಕಳ್ಳರು, ಕಳ್ಳತನಕ್ಕೆ ಯತ್ನಿಸಿ ಮನೆ ಮಾಲೀಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
‘ಪ್ರೊಫೆಷನಲ್ ಕೋರಿಯರ್ ನಡೆಸುತ್ತಿರುವ ಚಿನ್ನಿಕಟ್ಟಿ ಅವರ ಮನೆಗೆ ಮಂಗಳವಾರ ತಡರಾತ್ರಿ ಮುಸುಕುದಾರಿಗಳ ತಂಡ ನುಗ್ಗಿತ್ತು. ಮುಖ್ಯದ್ವಾರವನ್ನು ಕಬ್ಬಿಣದ ರಾಡಿನಿಂದ ಮೀಟಿ ಒಳಗೆ ಹೋಗಿತ್ತು. ಶಬ್ದ ಕೇಳಿದ್ದ ಚಿನ್ನಿಕಟ್ಟಿ ಮತ್ತು ಅವರ ಪತ್ನಿ, ಕೊಠಡಿಯಿಂದ ಹೊರಬಂದಿದ್ದರು. ಇದೇ ಸಂದರ್ಭದಲ್ಲಿ ಚಿನ್ನಿಕಟ್ಟಿ ಅವರು ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಕಳ್ಳರು, ಚಿನ್ನಿಕಟ್ಟಿಯವರ ಮೇಲೆಯೇ ಹಲ್ಲೆ ಮಾಡಿದ್ದರು. ಅವರ ಪತ್ನಿಯ ಮಾಂಗಲ್ಯವನ್ನು ಅರ್ಧ ಹರಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಚಿನ್ನಿಕಟ್ಟಿ ಮತ್ತು ಅವರ ಪತ್ನಿ ಇಬ್ಬರೂ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.