ADVERTISEMENT

2.46 ಲಕ್ಷ ಜಾನುವಾರುಗಳಿಗೆ ‘ಕಿವಿಯೋಲೆ’

ತಿಂಗಳಾಂತ್ಯಕ್ಕೆ ಗುರಿ ತಲುಪಲು ಕ್ರಮ: ‘ಇನಾಫ್‌’ ತಂತ್ರಾಂಶದಲ್ಲಿ ಮಾಹಿತಿ ದಾಖಲು

ಸಿದ್ದು ಆರ್.ಜಿ.ಹಳ್ಳಿ
Published 19 ಸೆಪ್ಟೆಂಬರ್ 2020, 14:09 IST
Last Updated 19 ಸೆಪ್ಟೆಂಬರ್ 2020, 14:09 IST
ಹಾವೇರಿಯಲ್ಲಿ ಜಾನುವಾರಿಗೆ ‘ವಿಶಿಷ್ಟ ಗುರುತಿನ ಕಿವಿಯೋಲೆ’ ಹಾಕುತ್ತಿರುವ ದೃಶ್ಯ
ಹಾವೇರಿಯಲ್ಲಿ ಜಾನುವಾರಿಗೆ ‘ವಿಶಿಷ್ಟ ಗುರುತಿನ ಕಿವಿಯೋಲೆ’ ಹಾಕುತ್ತಿರುವ ದೃಶ್ಯ   

ಹಾವೇರಿ: ಕೇಂದ್ರ ಸರ್ಕಾರದ ‘ಇನಾಫ್’‌ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ ಒಟ್ಟು 2.46 ಲಕ್ಷ ಜಾನುವಾರುಗಳಿಗೆ ತಿಂಗಳಾಂತ್ಯದೊಳಗೆ ‘ವಿಶಿಷ್ಟ ಗುರುತಿನ ಕಿವಿಯೋಲೆ’ (ಯುಐಡಿ ಇಯರ್‌ ಟ್ಯಾಗ್‌) ಹಾಕುವ ‌ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

2020–21ನೇ ಸಾಲಿನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ (ಎನ್‌.ಎ.ಡಿ.ಸಿ.ಪಿ) 2.46 ಲಕ್ಷ ಕಿವಿಯೋಲೆಗಳು ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆಗೆ ಸೆಪ್ಟೆಂಬರ್‌ನಲ್ಲಿ ಬಂದಿವೆ. ಈಗಾಗಲೇ 24,729 ಜಾನುವಾರುಗಳಿಗೆ ಕಿವಿಯೋಲೆಯನ್ನು ಹಾಕಿದ್ದು, 13,711 ಜಾನುವಾರುಗಳ ವಿವರಗಳನ್ನು ‘ಇನಾಫ್’‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 3.49 ಲಕ್ಷ ಜಾನುವಾರುಗಳಿದ್ದು, ಈ ಹಿಂದೆ ಸರಬರಾಜಾಗಿದ್ದ 1.32 ಲಕ್ಷ ಕಿವಿಯೋಲೆಗಳಲ್ಲಿ 1.13 ಲಕ್ಷ ಜಾನುವಾರುಗಳಿಗೆ ಕಿವಿಯೋಲೆಯನ್ನು ಹಾಕಲಾಗಿತ್ತು. 18 ಸಾವಿರ ಕಿವಿಯೋಲೆಗಳು ಬಾಕಿ ಉಳಿದಿದ್ದವು. ಈಗ ಹೊಸದಾಗಿ 2.46 ಲಕ್ಷ ಕಿವಿಯೋಲೆಗಳು ಜಿಲ್ಲೆಗೆ ಬಂದಿವೆ. ಜಿಲ್ಲೆಯ ಪ್ರತಿ ಅಧಿಕಾರಿ ಅಥವಾ ಸಿಬ್ಬಂದಿಗೆ ನಿತ್ಯ 25ರಿಂದ 30 ಕಿವಿಯೋಲೆಗಳನ್ನು ಹಾಕಲು ಗುರಿ ನಿಗದಿಪಡಿಸಲಾಗಿದೆ.

ADVERTISEMENT

ಪ್ರಯೋಜನವೇನು?

‘ಜಾನುವಾರುಗಳಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಕಿವಿಯೋಲೆ ಹಾಕಿ, ವಿವರವನ್ನು ‘ಇನಾಫ್‌’ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಗರ್ಭಧಾರಣೆ, ಪಶುವಿನ ಹೆರಿಗೆ, ಕಾಲುಬಾಯಿ ರೋಗ ಸೇರಿದಂತೆ ಹಲವಾರು ರೋಗಗಳ ಮಾಹಿತಿ ದಾಖಲಾಗುತ್ತದೆ. ಪಶುಗಳ ವ್ಯಾಪಾರಕ್ಕೂ ಇದು ಅನುಕೂಲವಾಗಲಿದೆ. ವಿಶೇಷವಾಗಿ ಪಶುಗಳು ಕಳ್ಳತನವಾದ ಸಂದರ್ಭದಲ್ಲಿ ಪತ್ತೆ ಹೆಚ್ಚಲು ತಂತ್ರಾಂಶ ನೆರವಾಗಲಿದೆ. ಜಿಲ್ಲೆಯ ಜಾನುವಾರುಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿರುತ್ತದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಎನ್‌.ಕೂಲೇರ ತಿಳಿಸಿದರು.

ಲಸಿಕಾ ಕಾರ್ಯಕ್ರಮ

2020–21ನೇ ಸಾಲಿನಲ್ಲಿ ಮೊದಲನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಅ.2ರಿಂದ ನವೆಂಬರ್‌ 15ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಲಸಿಕಾ ಕಾರ್ಯಕ್ರಮಕ್ಕೂ ಮುನ್ನ 6 ತಿಂಗಳು ಮೇಲ್ಪಟ್ಟ ಎತ್ತು, ಹಸು, ಎಮ್ಮೆ, ಕೋಣ ಮುಂತಾದ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಬೇಕು ಮತ್ತು ವಿವರಗಳನ್ನು ಇನಾಫ್‌ ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯ ಎಂದು ಆಯುಕ್ತಾಲಯ ಜಿಲ್ಲೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

‘ಜಿಲ್ಲೆಯ 45 ವೈದ್ಯರು, 150 ಅರೆತಾಂತ್ರಿಕ ಸಿಬ್ದಂದಿ ಸೇರಿದಂತೆ ಒಟ್ಟು 280 ಸಿಬ್ಬಂದಿ ಕಿವಿಯೋಲೆ ಹಾಕುವ ಕಾರ್ಯಾಚರಣೆಯಲ್ಲಿ ಸೆ.16ರಿಂದ ಪಾಲ್ಗೊಂಡಿದ್ದಾರೆ. ಮನೆ–ಮನೆಗೂ ಭೇಟಿ ನೀಡಿ ಪಶುಗಳ ಮಾಹಿತಿ ಪಡೆದು, ಕಿವಿಯೋಲೆ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುರಿ ಮತ್ತು ಮೇಕೆಗೂ ಕಿವಿಯೋಲೆ ಹಾಕುವ ಕಾರ್ಯಕ್ರಮ ಬರಲಿದೆ’ ಎಂದು ಡಾ.ರಾಜೀವ ಎನ್‌.ಕೂಲೇರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.