ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವರದಾ ನದಿಗೆ ನಿರ್ಮಿಸಿರುವ ಕೆಲವು ಬಾಂದಾರಗಳು (ಚಿಕ್ಕ ಸೇತುವೆ) ಮುಳುಗಡೆಯಾಗಿವೆ. ಇದರಿಂದಾಗಿ ನದಿಯ ಅಕ್ಕ–ಪಕ್ಕದ ಗ್ರಾಮಗಳ ಜನರಿಗೆ ಸಂಚಾರ ಸಮಸ್ಯೆ ಎದುರಾಗಿದೆ. ವರದಾ ನದಿಗೆ ಅಡ್ಡವಾಗಿ ಸವಣೂರು ತಾಲ್ಲೂಕಿನ ಕಳಸೂರು ಹಾಗೂ ಹಾನಗಲ್ ತಾಲ್ಲೂಕಿನ ಕೂಡಲ ಬಳಿ ಬಾಂದಾರಗಳನ್ನು ನಿರ್ಮಿಸಲಾಗಿದೆ. ವರದಾ ನದಿಯಲ್ಲಿ ನೀರು ಹೆಚ್ಚಿರುವುದರಿಂದ, ಎರಡೂ ಬಾಂದಾರಗಳು ಮುಳುಗಡೆಯಾಗಿವೆ. ಬಾಂದಾರದ ಮೂಲಕ ಜಿಲ್ಲಾ ಕೇಂದ್ರ ಹಾವೇರಿಯನ್ನು ಕೆಲ ನಿಮಿಷಗಳಲ್ಲಿ ತಲುಪುತ್ತಿದ್ದ ಗ್ರಾಮಸ್ಥರು, ಈಗ ಸುತ್ತಿ ಬಳಸಿ ಹಾವೇರಿಗೆ ಹೋಗಿ ಬರುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಎರಡೂ ಗ್ರಾಮಗಳ ಜನರು, ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.