ADVERTISEMENT

ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ: ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 16:13 IST
Last Updated 28 ಜುಲೈ 2022, 16:13 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಹಾವೇರಿ: ನವದೆಹಲಿ ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ವೇಳಾಪಟ್ಟಿ ಪ್ರಕಟಿಸಿದೆ. ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ದಿನಾಂಕ 01-08-2022 ರಿಂದ ಅರ್ಹ ಸಾರ್ವಜನಿಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ-6ರಲ್ಲಿ, ಹೆಸರು ಕಡಿಮೆಗೊಳಿಸಲು ನಮೂನೆ-7ರಲ್ಲಿ ಹಾಗೂ ಹೆಸರು ತಿದ್ದುಪಡಿ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೆಸರು ವರ್ಗಾವಣೆ ಮಾಡಿಕೊಳ್ಳಲು ನಮೂನೆ-8ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧಿಸಿದ ಬಿ.ಎಲ್.ಒ. ಗಳಿಗೆ ಸಲ್ಲಿಸಬಹುದು

ಆನ್‍ಲೈನ್ ಸಾಫ್ಟ್‌ವೇರ್‌ಗಳಾದ ನ್ಯಾಷನಲ್‌ ವೋಟರ್‌ ಸರ್ವಿಸ್‌ ಪೋರ್ಟಲ್‌(ಎನ್‌ವಿಎಸ್‌ಪಿ), ವೋಟರ್‌ ಹೆಲ್ಪ್‌ಲೈನ್‌ ಅಪ್ಲಿಕೇಶನ್‌ (ವಿ.ಎಚ್‌.ಎ)ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ದಿನಾಂಕ 01-08-2022ರಿಂದ ಪ್ರಸ್ತುತ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹೊಂದಿರುವ ಒಟ್ಟು 1470 ಮತಗಟ್ಟೆಗಳು ಹೊಂದಿರುವ ಎಲ್ಲಾ ಮತದಾರರ ಪಟ್ಟಿಯ ಭಾಗಗಳು ಹೊಂದಿರುವ ಪ್ರತಿಯೊಬ್ಬ ಮತದಾರರು ತಮ್ಮ ಹೆಸರಿನೊಂದಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಕೊಳ್ಳಲು ನಮೂನೆ-6ಬಿ ನಲ್ಲಿ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ಬಿ.ಎಲ್.ಓ. ರವರಿಗೆ ಸಲ್ಲಿಸಲು ಮತ್ತು ಸ್ವತಃ ಮತದಾರರೇ ತಮ್ಮ ಮೊಬೈಲ್ ಮುಖಾಂತರ ಆನ್‍ಲೈನ್ ಮೂಲಕ ಚುನಾವಣಾ ಆಯೋಗದ ನಿಗಧಿತ ಸಾಫ್ಟ್‌ವೇರ್‌ನಲ್ಲಿ ತಮ್ಮ ಆಧಾರ್‌ ಸಂಖ್ಯೆಯನ್ನು ಜೋಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಭಾರತ ಚುನಾವಣಾ ಆಯೋಗ ಪ್ರತಿ ಜನವರಿ 1ನೇ ದಿನಾಂಕವನ್ನು ಮತದಾರರ ಪಟ್ಟಿಯ ಅರ್ಹತಾ ದಿನಾಂಕ ಎಂದು ಪರಿಗಣಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಅಂದರೆ 1ನೇ ಏಪ್ರೀಲ್, 1ನೇ ಜುಲೈ, 1ನೇ ಅಕ್ಟೋಬರ್ ಮತ್ತು 1ನೇ ಜನೇವರಿ ಅರ್ಹತಾ ದಿನಾಂಕ ಎಂದು ನಿಗಧಿಪಡಿಸಿದ್ದು ಅರ್ಹ ಮತದಾರರಿಂದ ಅರ್ಜಿಗಳನ್ನು ಸ್ವೀಕರಿಸಲು ನಿರ್ದೇಶಿಸಿರುತ್ತಾರೆ.

ದಿನಾಂಕ 9-11-2022 ರಂದು ಸಮಗ್ರ ಮತದಾರರ ಪಟ್ಟಿ ಕರಡು ಪ್ರಕಟಣೆ, ದಿನಾಂಕ 9-11-2022ರಿಂದ 8-12-2022ರವರೆಗೆ 30 ದಿನಗಳ ಕಾಲ ಹಕ್ಕು ಮತ್ತು ಆಕ್ಷೇಪಣೆಗೆ ಅವಕಾಶವಿದೆ. ಈ ಅವಧಿಯಲ್ಲಿ ಬರುವ ಎರಡು ಶನಿವಾರ ಹಾಗೂ ಭಾನುವಾರ ದಿನಗಳಂದು ವಿಶೇಷ ಆಂದೋಲನ ಪರಿಗಣಿಸಿ ಬಿ.ಎಲ್.ಒ.ಗಳು ಆಯಾ ಮತಗಟ್ಟೆಗಳಲ್ಲಿ ಅರ್ಜಿ ಸ್ವೀಕರಿಸುವರು.

ದಿನಾಂಕ 26-12-2022 ರಂದು ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ದಿನಾಂಕ 03-01-2023ರಂದು ಆಯೋಗದ ಅನುಮತಿ ಪಡೆದು ದತ್ತಾಂಶ ಮುದ್ರಣಕ್ಕೆ ಕಳುಹಿಸಲಾಗುವುದು. ದಿನಾಂಕ 05-01-2023 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.