ADVERTISEMENT

‘ನ್ಯಾಯ ಸಿಗದಿದ್ದರೆ ಸಾಮೂಹಿಕ ಆತ್ಮಹತ್ಯೆ’

ದಯಾಮರಣ ಕೋರಿ ನಿವೃತ್ತ ಶಿಕ್ಷಕರಿಂದ ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:16 IST
Last Updated 24 ಸೆಪ್ಟೆಂಬರ್ 2020, 14:16 IST
ರಾಷ್ಟ್ರಪತಿಗೆ ಕಳುಹಿಸಿದ ದಯಾಮರಣದ ಪ್ರತಿಯನ್ನು ನಿವೃತ್ತ ಶಿಕ್ಷಕರು ಹಾವೇರಿ ನಗರದಲ್ಲಿ ಗುರುವಾರ ಪ್ರದರ್ಶಿಸಿದರು 
ರಾಷ್ಟ್ರಪತಿಗೆ ಕಳುಹಿಸಿದ ದಯಾಮರಣದ ಪ್ರತಿಯನ್ನು ನಿವೃತ್ತ ಶಿಕ್ಷಕರು ಹಾವೇರಿ ನಗರದಲ್ಲಿ ಗುರುವಾರ ಪ್ರದರ್ಶಿಸಿದರು    

ಹಾವೇರಿ: ‘ಪಿಂಚಣಿ ಸೌಲಭ್ಯ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಎಂಟು ನಿವೃತ್ತ ಶಿಕ್ಷಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ’ ಎಂದು ರಾಜ್ಯ ಅನುದಾನಿತ ಶಾಲಾ– ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ತಿಂಗಳೊಳಗೆ ರಾಷ್ಟ್ರಪತಿಗಳು ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ವಿಧಾನಸೌಧದ ಮುಂಭಾಗ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಎಂ.ಎನ್ ಮಲ್ಲಾಡದ,ಜಿ.ವಿ ಅನುಸೂಯ,ಸುಮಂಗಳಾ ಪಿ. ಪಾಟೀಲ್,ಲಾಲಪ್ಪ ಲಚ್ಚಪ್ಪ ಲಮಾಣಿ,ಎಂ.ಪಿ ನವಲೆ,ಬಿ.ಎಂ ಕರಿಮಾಳಮ್ಮನವರ,ಎಸ್.ಎಸ್ ರಾಮನಗೌಡರ ಹಾಗೂಡಿ.ಆರ್ ಬಣಕಾರ ಅವರು ರಾಷ್ಟ್ರಪತಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

6ನೇ ವೇತನ ಆಯೋಗದ ಮುಂದೆ ಪಿಂಚಣಿ ಬೇಡಿಕೆಯನ್ನಿಟ್ಟಾಗ, ನಮ್ಮದು ನ್ಯಾಯಯುತ ಬೇಡಿಕೆ ಎಂದು ಪರಿಗಣಿಸಿ, ಅನುದಾನಿತ ನೌಕರರಿಗೂ ಪಿಂಚಣಿ ನೀಡಲು ರಾಜ್ಯ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಪುನರ್‌ ಪರಿಶೀಲನಾ ಸಮಿತಿ ರಚಿಸಿ, ಶಿಫಾರಸ್ಸನ್ನು ತಿರಸ್ಕರಿಸಿತು. ಅನುದಾನಿತ ನೌಕರರ ಅನುದಾನಕ್ಕೂ ಪೂರ್ವದ ಸೇವೆಯನ್ನು ಪಿಂಚಣಿ ಮತ್ತು ಇತರೆ ಸೌಲಭ್ಯಗಳಿಗೆ ಪರಿಗಣಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ಪಡೆದುಕೊಂಡಿದೆ ಎಂದು ವಿವರಿಸಿದರು.

ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ನೌಕರರು, ತಾವು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು, ಪಿಂಚಣಿ ಇಲ್ಲದೆ ಬದುಕು ನಡೆಸುವುದು ಕಷ್ಟವಾಗಿದೆ. ಹಾಗಾಗಿ ನಮಗೆ ಪಿಂಚಣಿ ನೀಡಿ, ಇಲ್ಲವೇ ಸಾಯಲು ಅನುಮತಿ ನೀಡಿ’ ಎಂದು ಅಳಲು ತೋಡಿಕೊಂಡರು.

ರಾಜ್ಯ ಕೋಶಾಧ್ಯಕ್ಷ ಬಿ.ಜಿ ಕೊರಗ, ರಾಜ್ಯ ಸಂಚಾಲಕ ಮಂಜುನಾಥ್ ಬತ್ತದ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಫ್.ಎಚ್. ಕೊರವರ, ಮತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಎಸ್ ಕನ್ನಕ್ಕನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.