ADVERTISEMENT

‘ವೃದ್ಧಾಶ್ರಮಗಳ ಹೆಚ್ಚಳ ಕಳವಳಕಾರಿ’

ಶಕ್ತಿ ವೃದ್ಧಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 16:24 IST
Last Updated 15 ಮಾರ್ಚ್ 2022, 16:24 IST
–
   

ಹಾವೇರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಕದಳಿ ಮಹಿಳಾ ವೇದಿಕೆ ವಿಶ್ವ ಮಹಿಳಾ ದಿನವನ್ನು ನಗರದ ಶಕ್ತಿ ವೃದ್ಧಾಶ್ರಮದಲ್ಲಿ ಮಂಗಳವಾರ ಹಿರಿಯ ಚೇತನಗಳಿಗೆ ಸೀರೆ, ಧೋತರ ವಿತರಿಸಿ ಅವರೊಂದಿಗೆ ಸಹಭೋಜನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹಿರಿಯ ಕಲಾವಿದ, ಶಿಕ್ಷಕ ಕೆ. ಆರ್. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೊಂದ ಜೀವಗಳೊಂದಿಗೆ ಇಂತಹ ಕಾರ್ಯಕ್ರಮ ಅನುಕರಣೀಯವಾಗಿದೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಅನಾಥ ಪ್ರಜ್ಞೆಯಿಂದ ನೀವೆಲ್ಲ ಹೊರಬರಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ನೀಡಿ ತಾಯಿಯ ಮಮತೆಯನ್ನು ಬಿಂಬಿಸುವ ಹಾಡುಗಳನ್ನು ಹೇಳಿ ಭಾವಪರಶರನ್ನಾಗಿ ಮಾಡಿದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಅನಾಥಾಶ್ರಮದಲ್ಲಿ ಬಡವರ ಮಕ್ಕಳು ಕಾಣಸಿಗುತ್ತಾರೆ. ವೃದ್ಧಾಶ್ರಮದಲ್ಲಿ ಶ್ರೀಮಂತ ಮಕ್ಕಳ ಹೆತ್ತವರು ಕಾಣಸಿಗುತ್ತಾರೆ. ಇಂದಿನ ಸಮಾಜದಲ್ಲಿ ಕಲಿಯದವರಿಗಿಂತ ಕಲಿತ ಜನರೇ ತಮ್ಮ ತಂದೆ-ತಾಯಿಗಳನ್ನು ಕೀಳಾಗಿ ಕಾಣುವ ಪ್ರವೃತ್ತಿ ಬೆಳೆಯುತ್ತಿರುವುದರಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದರು.

ADVERTISEMENT

ಹಿರಿಯ ಶಿಕ್ಷಕ ಕೆ. ಬಿ. ಭಿಕ್ಷಾವರ್ತಿಮಠ,ಹಿರಿಯ ಲೇಖಕಿ ಸಿದ್ದುಮತಿ ನೆಲವಿಗಿ ಮಾತನಾಡಿದರು.ನಟ ಶಂಕರ ಕುಮ್ಮಣ್ಣನವರ ತಾವೇ ರಚಿಸಿದ ನಾಟಕ ‘ಕೋರ್ಟ ಆರ್ಡರ್’ ಒಂದು ಪಾತ್ರದ ಸನ್ನಿವೇಶವನ್ನು ಮನೋಜ್ಞವಾಗಿ ಅಭಿನಯಿಸಿ ಹಿರಿಯ ಚೇತನಗಳ ಕಣ್ಣುಗಳನ್ನು ತೇವಗೊಳಿಸಿದರು. ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ ವಚನ ವಿಶ್ಲೇಷಣೆ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆವಹಿಸಿ ಮಾತನಾಡಿದರು.ವೇದಿಕೆಯ ಸುಮಾ ಕಾಡದೇವರಮಠ, ಇಂದಿರಾ ಪೂಜಾರ, ಮಹದೇವಕ್ಕ ಬೆಳ್ಳಟ್ಟಿ, ಶ್ರೀದೇವಿ ಹಿರೇಮಠ ಹಾಗೂ ನೀಲಮ್ಮ ಉಪ್ಪಿನ ಪಾಲ್ಗೊಂಡಿದ್ದರು.

ಲತಾ ಭರತನೂರಮಠ ವಚನ ಹಾಡಿದರು. ವನಿತಾ ಅರಳೇಶ್ವರ ಸ್ವಾಗತಿಸಿದರು. ಗೌರವಾಧ್ಯಕ್ಷೆ ಲಲಿತಕ್ಕ ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೃದ್ಧಾಶ್ರಮದ ರವೀಂದ್ರನಾಥ ಅನಿಸಿಕೆ ವ್ಯಕ್ತಪಡಿಸಿದರು. ಸೌಭಾಗ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಕಮಲಾ ಬುಕ್ಕಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.