ADVERTISEMENT

ಗ್ರಾಮಾಭಿವೃದ್ಧಿಗೆ ಶ್ರಮವಹಿಸಿ: ಶಾಸಕ ನೆಹರು ಓಲೇಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 15:42 IST
Last Updated 16 ಫೆಬ್ರುವರಿ 2021, 15:42 IST
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಮೊದಲ ತಂಡಕ್ಕೆ ಮಂಗಳವಾರ ಆಯೋಜಿಸಿದ್ದ ಐದು ದಿನಗಳ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಶಾಸಕ ನೆಹರು ಓಲೇಕಾರ ಉದ್ಘಾಟಿಸಿದರು 
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಮೊದಲ ತಂಡಕ್ಕೆ ಮಂಗಳವಾರ ಆಯೋಜಿಸಿದ್ದ ಐದು ದಿನಗಳ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಶಾಸಕ ನೆಹರು ಓಲೇಕಾರ ಉದ್ಘಾಟಿಸಿದರು    

ಹಾವೇರಿ: ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಸರ್ಕಾರ ನೀಡಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ’ ಎಂದು ಶಾಸಕ ನೆಹರು ಓಲೇಕಾರ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ, ಹಾವೇರಿ ತಾಲ್ಲೂಕು ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮೈಸೂರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಸಹಯೋಗದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಮೊದಲ ತಂಡಕ್ಕೆ ಮಂಗಳವಾರ ಆಯೋಜಿಸಿದ್ದ ಐದು ದಿನಗಳ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ನೂತನ ಚುನಾಯಿತ ಸದಸ್ಯರು ತಮ್ಮ ಕರ್ತವ್ಯಗಳು ಹಾಗೂ ಗ್ರಾಮ ಪಂಚಾಯಿತಿಯ ಯೋಜನೆಗಳ ಅನುಷ್ಠಾನ ಕುರಿತಂತೆ ಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಪೂರ್ಣ ಮಾಹಿತಿ ಹೊಂದಿದಾಗ ಮಾತ್ರ ಉತ್ತಮವಾಗಿ ಕರ್ತವ್ಯಗಳನ್ನು ನಿಭಾಯಿಸಲು ಸಾಧ್ಯ ಹಾಗೂ ಗ್ರಾಮಗಳ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ADVERTISEMENT

ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ಚೆಕ್‍ಗಳಿಗೆ ಸಹಿ ಮಾಡುವ ಅಧಿಕಾರ ಇರುವುದಿಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಈ ಅಧಿಕಾರ ನೀಡಲಾಗಿದೆ. ಇದರಿಂದ ಗ್ರಾಮದ ಆಡಳಿತ ವ್ಯವಸ್ಥೆಯನ್ನು ಇನ್ನೂ ಪರಿಣಾಮಕಾರಿಯಾಗಿ ಸುಧಾರಿಸಬಹುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಇಒ ಬಸವರಾಜಪ್ಪ, ಎಸ್.ಡಿ.ಆರ್.ಪಿ. ಸಹಾಯಕ ನಿರ್ದೇಶಕ ಖಾನ್‍ಪರವೇಜ್, ಐ.ಇ.ಸಿ. ಸಮನ್ವಯಾಧಿಕಾರಿ ಗಿರೀಶ ಬೆನ್ನೂರು, ಸ್ವಯಂ ಸೇವಾ ಸಂಸ್ಥೆಯ ಮುತ್ತುರಾಜ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.