ADVERTISEMENT

ಮನುಷ್ಯನಾಗಿ ಬದುಕಲು ಕಲಿತಿಲ್ಲ

ಹಾವೇರಿ: ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಸಾಹಿತಿ ಹನುಮಂತ ಗೊಲ್ಲರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2018, 11:36 IST
Last Updated 25 ಜುಲೈ 2018, 11:36 IST
ಹಾವೇರಿಯಲ್ಲಿ ಬುಧವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿದರು
ಹಾವೇರಿಯಲ್ಲಿ ಬುಧವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿದರು   

ಹಾವೇರಿ:ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತಿದ್ದಾನೆ. ಆದರೆ, ಭೂಮಿಯ ಮೇಲೆ ಮನುಷ್ಯನಾಗಿ ಬದುಕುವುದನ್ನು ಕಲಿತಿಲ್ಲ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಶಿವಲಿಂಗೇಶ್ವರ ಮಹಿಳಾ ವಿದ್ಯಾಲಯದಲ್ಲಿ ಬುಧವಾರ ನಡೆದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

‘ದೇಶದ ಜನಸಂಖ್ಯೆಯು 129.68 ಕೋಟಿ ಇದ್ದು, 2028ರ ವೇಳೆ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶ ಭಾರತ ಆಗಲಿದೆ. ‘ಹೊಸ ಅಲೆ, ವಿಶ್ವಾಸ ಸಂಪೂರ್ಣ, ವಿಕಾಸದ ಜವಾಬ್ದಾರಿ’ ಎಂಬದು ಈ ಬಾರಿಯ ಧ್ಯೇಯ‌ವಾಗಿದೆ. ದೇಶದಲ್ಲಿ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿದ್ದರೆ, ಈಗವಿಭಕ್ತ ಕುಟುಂಬಕ್ಕೆ ಮೊರೆ ಹೋಗುತ್ತಿದ್ದಾರೆ. ಚಿಕ್ಕ ಕುಟುಂಬವು ದೇಶದ ಸುಭದ್ರತೆ ಮತ್ತು ಅಭಿವೃದ್ಧಿಗೆ ಪೂರಕ ಎಂದರು.

ADVERTISEMENT

ಕುಟುಂಬ ಕಲ್ಯಾಣ ಯೋಜನೆಗಳನ್ನು ಮೊದಲು ಜಾರಿಗೆ ತಂದ ದೇಶ ಭಾರತ. ಜನಸಂಖ್ಯೆ ನಿಯಂತ್ರಣಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರಗಳು ರೂಪಿಸಿವೆ. ಆದರೆ ಅದನ್ನು ಪಾಲಿಸುವವರು ವಿರಳವಾಗಿದ್ದಾರೆ ಎಂದರು.

ಜನಸಂಖ್ಯೆ ದೇಶಕ್ಕೆ ವರವಾಗಬೇಕೇ ಹೊರತು ಹೊರೆಯಾಗಬಾರದು ಎಂದ ಅವರು, ಭ್ರೂಣ ಹತ್ಯೆ ತಡೆಗೆ ಎಲ್ಲರೂ ಶ್ರಮಿಸಬೇಕು.ಈ ನಿಟ್ಟಿನಲ್ಲಿ ಎಲ್ಲರಿಗೂ ಕಾನೂನಿನ ಜ್ಞಾನ ಅವಶ್ಯವಾಗಿದೆ. ಯಾವುದೇ ವಿಚಾರದಲ್ಲಿ ಚಿಕಿತ್ಸೆಗಿಂತ ಮುಂಜಾಗ್ರತೆ ಉತ್ತಮ ಎಂದರು.

ಬೆಂಗಳೂರಿನಂತ ಮಹಾನಗರದಲ್ಲಿ 20 ಲಕ್ಷ ವಾಹನಗಳಿವೆ. ಇದು ಪರಿಸರಕ್ಕೂ ಮಾರಕವಾಗಿವೆ. ಜನಸಂಖ್ಯೆ ಹೆಚ್ಚಳವು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.

ಮಹಿಳೆಯರು ಸರಾಸರಿ 76 ವರ್ಷ ಬದುಕುತ್ತಿದ್ದು, ಪುರುಷರು 63 ಮಾತ್ರ ಜೀವಿಸುತ್ತಿದ್ದಾರೆ. ಆದರೂ ಮಹಿಳೆಯರ ಅನುಪಾತ ಕಡಿಮೆಯಾಗಿರುವುದು ವಿಪರ್ಯಾಸ. ಸ್ತ್ರಿ ಭ್ರೂಣ ಹತ್ಯೆ, ಗಂಡು ಮಕ್ಕಳ ಬಯಕೆ, ಮೂಲ ಸೌಕರ್ಯದ ಕೊರತೆ, ಪೌಷ್ಟಿಕ ಆಹಾರದ ಕೊರತೆಯು ಸ್ತ್ರೀ ಅನುಪಾತ ಕಡಿಮೆಯಾಗಲು ಕಾರಣಗಳು ಎಂದರು.

1987ರಲ್ಲಿ ಜು.11 ಅನ್ನು ವಿಶ್ವ ಜನಸಂಖ್ಯಾ ದಿನಾಚರಣೆಯಾಗಿ ಆಚರಿಸಲು ನಿರ್ಧರಿಸಲಾಯಿತು. ಪ್ರಸ್ತುತ ಜಿಲ್ಲೆಯ ಜನಸಂಖ್ಯೆಯು 17 ಲಕ್ಷ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ ಜಯಾನಂದ ಹೇಳಿದರು.

ಪ್ರಾಂಶುಪಾಲರಾದ ಸವಿತಾ ಹಿರೇಮಠ,ಸರ್ಕಾರಿ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಕುದುರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಪ್ರಭಾಕರಕುಂದೂರ, ಹಿರಿಯ ಆರೋಗ್ಯ ಮೇಲ್ವಿಚಾರಕ ಕಂಬಳಿ, ಟಿ.ಎಸ್‌.ಹೂಗಾರ, ಬಿ.ವಿ ಹಿರೇಮಠ ಇದ್ದರು. ಇದಕ್ಕೂ ಮೊದಲೂ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.