ADVERTISEMENT

ಆಳಂದ: 15 ಹೊಸ ಮತಗಟ್ಟೆ ಸ್ಥಾಪನೆ

ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪಕ್ಷಗಳ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 12:07 IST
Last Updated 29 ಮಾರ್ಚ್ 2018, 12:07 IST

ಆಳಂದ: ಮತಕ್ಷೇತ್ರದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 15 ಮತಗಟ್ಟೆ ಕೇಂದ್ರಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ. ಹೀಗಾಗಿ ಒಟ್ಟು 259 ಮತಗಟ್ಟೆ ಕೇಂದ್ರಗಳು ಸ್ಥಾಪಿಸಲಾಗಿದೆ’ ಎಂದು ಪ್ರಭಾರಿ ತಹಶೀಲ್ದಾರ್ ಬಿ.ಜಿ.ಕುದರಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ರಾಜ್ಯ ವಿಧಾನ ಸಭೆ ಚುನಾವಣೆ ಅಧಿಸೂಚನೆ ಪ್ರಕಟವಾದ ಬೆನ್ನಲ್ಲೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಅವರಿಗೆ ಈ ಮಾಹಿತಿ ನೀಡಿದರು.

‘ಸರಾಸರಿ 887 ಮತದಾರರು ಆಯಾ ಮತಗಟ್ಟೆಯಲ್ಲಿ ಇದ್ದಾರೆ. ಕೆಲವು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಅದಕ್ಕೆ ಸಂಬಂಧಿಸಿದಂತೆ ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ. ಕ್ಷೇತ್ರದ ಖಜೂರಿ, ಚಿತಲಿ, ಹಿರೋಳಿ, ದೇಗಾಂವ, ಖಾನಾಪುರ, ಚಲಗೇರಾ, ಗೋಳಾ (ಬಿ), ಸುಂಟನೂರು, ಮಾಡಿಯಾಳ, ಬಟ್ಟರ್ಗಾ, ನಿಂಬರ್ಗಾ, ಯಳಸಂಗಿ ಗ್ರಾಮ ಹಾಗೂ ಆಳಂದ ಪಟ್ಟಣದಲ್ಲಿ 3 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕ್ಷೇತ್ರದಲ್ಲಿ ಒಟ್ಟು 2,29,638 ಮತದಾರರು ಇದ್ದಾರೆ. ಇವರಲ್ಲಿ 4,800 ಹೊತ ಮತದಾರರು ಸೇರ್ಪಡೆಯಾಗಿದ್ದಾರೆ. ಅಲ್ಲದೆ ಹೊಸ ಮತದಾರರ ಹೆಸರು ಸೇರ್ಪಡೆ ಕಾರ್ಯ ಮುಂದುವರೆಯಲಿದೆ. ಚುನಾವಣೆ ಅಧಿಸೂಚನೆ ಪ್ರಕಟವಾದ ಪ್ರಯುಕ್ತ ಕ್ಷೇತ್ರದಲ್ಲಿ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ’ ಎಂದು ವಿವರಿಸಿದರು.

ಗುರಮಠಕಲ್‌ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಚುನಾವಣಾ ಅಧಿಕಾರಿ ಅರುಣಕುಮಾರ, ಸಿಪಿಐ ಎಚ್.ಬಿ.ಸಣ್ಣಮನಿ, ಪಿಎಸ್ಐ ಸುರೇಶ ಬಾಬು, ಪಶು ವೈದ್ಯಾಧಿಕಾರಿ ಡಾ.ಸಂಜಯ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ರಾಜಶೇಖರ ಮಲಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.