ADVERTISEMENT

ಇನ್ನೂ ಈಡೇರದ ಗ್ರಾಮ ಸ್ವರಾಜ್ಯ ಕನಸು

ಎಎಪಿ ಅಭ್ಯರ್ಥಿ ಬಿ.ಟಿ.ಲಲಿತಾ ನಾಯಕ್ ಬೇಸರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 9:55 IST
Last Updated 12 ಏಪ್ರಿಲ್ 2014, 9:55 IST

ಗುಲ್ಬರ್ಗ: ‘ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿ­ವಾಲ್ ಅವರು ಪ್ರತಿಭಟನೆ­ಗೆಂದು ಬೀದಿಗೆ ಇಳಿದಾಗಲೆಲ್ಲ ಬೀದಿ ರಂಪಾ­ಯಣದ ಬಗ್ಗೆ ಚರ್ಚೆಯಾಗಿದೆ. ಆದರೆ, ಆಮ್ ಆದ್ಮಿಯಂತಹ ಮುಖ್ಯಮಂತ್ರಿ­ಯಿಂದ ಮಾತ್ರ ಬೀದಿಗಿಳಿಯಲು ಸಾಧ್ಯ. ಗಾಂಧೀಜಿ ಕಂಡ ರಾಮರಾಜ್ಯ ಕನಸನ್ನು ನನಸು ಮಾಡುವುದೇ ಕೇಜ್ರಿವಾಲ್ ಮುಖ್ಯ ಆಶಯವಾಗಿದೆ’.

–ಹೀಗೆಂದು ಹೇಳಿದವರು ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬಿ.ಟಿ.ಲಲಿತಾ ನಾಯಕ್.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಪತ್ರಕರ್ತ-­ರೊಂದಿಗೆ ಸಂವಾದ’ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು ಇಷ್ಟು ವರ್ಷ­ಗಳಾದರೂ ಹಿಂದೂ–ಮುಸ್ಲಿಂ–ಸಿಖ್ ಭಾಯಿ ಭಾಯಿ ಕಲ್ಪನೆ, ಗಾಂಧೀಜಿ ಅವರ ಗ್ರಾಮ­ಸ್ವರಾಜ್ಯ ಕನಸು, ಅಂಬೇಡ್ಕರ್‌ರ ಸಮಾನತೆ, ಬಸ­ವಣ್ಣನ ಕಾಯಕ ತತ್ವ ಇಂದಿಗೂ ಈಡೇರದಿರುವುದು ದುರಂತ. ಇಂತಹ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದರಿಂದ ಹಾಗೂ ಮುಖ್ಯಮಂತ್ರಿ ಯಾವಾಗಲೂ ಸಾಮಾನ್ಯ ಮನುಷ್ಯನಾಗಿರಬೇಕು ಎಂಬ ಕಾರಣಕ್ಕೆ ಕೇಜ್ರಿವಾಲ್  ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಕೇಜ್ರಿವಾಲ್ ಅವರು ಕರೆ ಮಾಡಿ ಗುಲ್ಬರ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ಸಂತೋಷ ಹೆಗ್ಡೆ, ಎಸ್.ಕೆ.ಕಾಂತಾ ಅವರೂ ಒತ್ತಾ­ಯಿ­ಸಿದರು. ಹೀಗಾಗಿ ಇಲ್ಲಿಗೆ ಬಂದೆ. ಆದರೆ, ಇಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. ಅಪೌಷ್ಟಿಕತೆ, ಮಕ್ಕಳ ಮಾರಾಟ, ಪ್ರತಿ 10 ಮನೆಗಳಲ್ಲಿ ಇಬ್ಬರು ಅಂಗವಿಕಲರು ಇರುವುದು, ಬಯಲು ಶೌಚಾಲಯ ವ್ಯವಸ್ಥೆ ನೋಡಿದ ಬಳಿಕ ಮತದಾರರ ಮನೆಗಳಿಗೆ ತೆರಳಿ ಮತ ಕೇಳಲು ಸಂಕೋಚ ಉಂಟಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಘಟಾನುಘಟಿಗಳು ತಮ್ಮ ಮಕ್ಕಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಆಸ್ತಿ ಸಂಪಾದಿಸಿದ್ದಾರೆ. ವಕ್ಫ್‌ ಜಾಗವನ್ನೂ ಕಬಳಿಸಲಾಗಿದೆ. ಜನರನ್ನು ಅಂಧಕಾರ­ದಲ್ಲಿ ಇಟ್ಟು ಆಡಳಿತ ನಡೆಸುತ್ತ ಬಂದಿದ್ದಾರೆ. ಆರೋಗ್ಯವಂತರೇ ಭಾಗ್ಯ­ವಂತರು ಎಂಬ ಕೆಟ್ಟ ಸ್ಥಿತಿ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಪಾರದರ್ಶಕ, ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣು­ತ್ತಿಲ್ಲ. ಆದಾಗ್ಯೂ ಘಟಾನುಘಟಿಗಳು ಎಂದು ಬಿಂಬಿಸಲಾಗುತ್ತಿದೆ’ ಎಂದು ಪರೋಕ್ಷವಾಗಿ ಖರ್ಗೆ, ಬೆಳಮಗಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಾದದುದ್ದಕ್ಕೂ ಆಮ್ ಆದ್ಮಿ ಬಗ್ಗೆಯೇ ಮಾತನಾಡಿದ ಅವರು, ‘ಜನರು, ಸಂಘ–ಸಂಸ್ಥೆಗಳು, ವಿವಿಧ ಸಂಘಟನೆಗಳ ಸದಸ್ಯರು ನಮ್ಮೊಂದಿಗೆ ಇದ್ದಾರೆ. ಏ. 14 ರಂದು ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್, ಹರಿಹರನ್ ಹಾಗೂ ಎಸ್.ಆರ್.­ಹಿರೇಮಠ ಅವರು ಪ್ರಚಾರಕ್ಕೆ ಬರಲಿದ್ದಾರೆ’ ಎಂದರು. ಎಎಪಿ ಮುಖಂಡರಾದ ಎಲ್.ಎಸ್.­ರಾಠೋಡ, ಸೈಯದ್ ಖಲೀಮು­ದ್ದೀನ್, ಶಿವಕುಮಾರ್ ರೇಷ್ಮೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಇದ್ದರು.

ಸ್ಥಳೀಯ ಪ್ರಣಾಳಿಕೆ
ರೈತರ ಬೆಳೆಗೆ ಯೋಗ್ಯ ಬೆಲೆ

ಗೃಹ ಕೈಗಾರಿಕೆಗಳಿಗೆ ಆದ್ಯತೆ
ಲಂಚ ರಹಿತ ಬದುಕು   ಕಲ್ಪಿಸು­ವುದು
ಮೂಲಸೌಕರ್ಯ ಒದಗಿಸುವುದು
ಅಂಗವಿಕಲರು, ಬಾಲಕಾರ್ಮಿ­ಕರು, ವೃದ್ಧರಿಗೆ ವಿಶೇಷ ನೆರವು
ಕೆರೆ, ಜಲಾಶಯ, ನದಿಗಳ ಹೂಳು ಎತ್ತುವುದು
ಎಲ್ಲರಿಗೂ ಶೌಚಾಲಯ ವ್ಯವಸ್ಥೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.