ADVERTISEMENT

ಈಶಾನ್ಯ ಕ್ಷೇತ್ರ: ನಾರಾ ರೆಡ್ಡಿ ಜೆಡಿಎಸ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 9:34 IST
Last Updated 15 ಮಾರ್ಚ್ 2018, 9:34 IST
ನಾರಾ ಪ್ರತಾಪ್ ರೆಡ್ಡಿ
ನಾರಾ ಪ್ರತಾಪ್ ರೆಡ್ಡಿ   

ಕಲಬುರ್ಗಿ: ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಳ್ಳಾರಿಯ ನಾರಾ ಪ್ರತಾಪ್‌ ರೆಡ್ಡಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

’ನಾರಾ ಪ್ರತಾಪ್‌ ರೆಡ್ಡಿ ಅವರು ಬಿ.ಎ ಪದವೀಧರರಾಗಿದ್ದು, ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 1885ರಿಂದ 1994ರ ವರೆಗೆ ಬಳ್ಳಾರಿ ಜೆಡಿಎಸ್‌ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ತಡಕಲ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಆರು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈಶಾನ್ಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪದವೀಧರರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಶಾಲೆ, ಕಾಲೇಜು, ಶಿಕ್ಷಕರ ಪರವಾದ ಕಾಯ್ದೆಗಳನ್ನು ರಚಿಸಿದ್ದಾರೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮೇಲ್ಮನೆಯಲ್ಲಿ ಧ್ವನಿ ಎತ್ತುತ್ತ ಬಂದಿದ್ದೇವೆ. ಇದು ನಮ್ಮ ಅಭ್ಯರ್ಥಿ ಗೆಲುವಿಗೆ ನೆರವಾಗಲಿದೆ’ ಎಂದರು.

‘ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ಅಗತ್ಯ ಇರುವಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅನೇಕ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ’ ಎಂದು ಆಪಾದಿಸಿದರು.

ಅಭ್ಯರ್ಥಿ ಎನ್. ಪ್ರತಾಪ್ ರೆಡ್ಡಿ ಮಾತನಾಡಿ, ‘ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಪ್ರತಿ ವರ್ಷ ₹1,500 ಕೋಟಿ ಹಣ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಲಾಗಿದೆ. ಆದರೆ, ಈ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಲಾಗಿಲ್ಲ. ₹400ರಿಂದ ₹500 ಕೋಟಿ ಬಳಸಿ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಈ ಭಾಗದಲ್ಲಿ ಶೈಕ್ಷಣಿಕ ಸಮಸ್ಯೆಗಳು ಗಂಭೀರ ಸ್ವರೂಪದಲ್ಲಿದೆ. ಶಿಕ್ಷಕರು, ಪದವೀಧರರು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಜನಪರ, ಶಿಕ್ಷಕರಪರ ಕೆಲಸ ಮಾಡವವರಿಗೆ ಈ ಬಾರಿ ಅವಕಾಶ ಸಿಗಲಿದೆ’ ಎಂದರು.

ಮುಖಂಡರಾದ ಶ್ರೀಕಂಠ ಗೌಡ, ಬಸವರಾಜ ದಿಗ್ಗಾವಿ, ಕೃಷ್ಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.