ADVERTISEMENT

ಕಾಂಗ್ರೆಸ್‌– ಬಿಜೆಪಿ ನೇರಾನೇರ

ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರ

ಗಣೇಶ ಚಂದನಶಿವ
Published 9 ಮೇ 2018, 10:32 IST
Last Updated 9 ಮೇ 2018, 10:32 IST

ಕಲಬುರ್ಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಮತ್ತು ಬಿಜೆಪಿಯ ನೇರ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದೆ.

ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಡಾ.ಉಮೇಶ ಜಾಧವ ಮತ್ತು ಬಿಜೆಪಿ ಅಭ್ಯರ್ಥಿ ಸುನೀಲ್‌ ವಲ್ಲ್ಯಾಪುರ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದಾರೆ. ಮೇಲ್ನೋಟಕ್ಕೆ ಸಮಬಲದ ಹೋರಾಟ ಕಂಡರೂ ಜಾತಿ ಮತಗಳೇ ಫಲಿತಾಂಶವನ್ನು ನಿರ್ಧರಿಸಲಿವೆ ಎಂಬ ಮಾತು ಕೇಳಿಬರುತ್ತಿದೆ.

‘ಚಿಂಚೋಳಿ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿ ಹಂಚಿ ಹೋಗಿರುವ ಈ ಕ್ಷೇತ್ರದಲ್ಲಿ ಜಲಾಶಯಗಳಿದ್ದರೂ ನೀರಾವರಿ ಅಷ್ಟಾಗಿ ಆಗಿಲ್ಲ. ಬಗರ್‌ ಹುಕುಂ ಸಾಗುವಾಳಿದಾರರ ಸಮಸ್ಯೆ ಪರಿಹಾರವಾಗಿಲ್ಲ. ಉದ್ಯೋಗ ಅರಸಿ ಗುಳೆ ಹೋಗುವುದು ತಪ್ಪಿಲ್ಲ. ಮಕ್ಕಳ ಮಾರಾಟದ ಕಳಂಕ ನಿವಾರಣೆಯಾಗಿಲ್ಲ. ಐಟಿಐ ಕಾಲೇಜು ಹೊರತುಪಡಿಸಿದರೆ ಇತರೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಕಾಲೇಜುಗಳು ಇಲ್ಲ’ ಎಂಬ ಕೊರತೆಯನ್ನು ಕ್ಷೇತ್ರದ ಜನ ಮುಂದಿಡುತ್ತಾರೆ.

ADVERTISEMENT

‘ಡಾ.ಉಮೇಶ ಜಾಧವ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ರಸ್ತೆಯ ಜಾಲ ಸುಧಾರಣೆಯಾಗಿದೆ. ಶಾಲಾ–ಕಾಲೇಜುಗಳ ಕಟ್ಟಡಗಳು ನಿರ್ಮಾಣಗೊಂಡಿವೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಾಸಕರು ಜನರ ಕೈಗೆ ಸಿಗುತ್ತಾರೆ’ ಎಂಬ ಮೆಚ್ಚುಗೆಯ ಮಾತುಗಳನ್ನು ಅವರ ಪಕ್ಷದವರು ಹೇಳುತ್ತಾರೆ.

‘ತಮ್ಮ ಸಮುದಾಯದವರಿಗೇ ಹೆಚ್ಚಿನ ಆದ್ಯತೆ ನೀಡಿದ್ದಾರೆ’ ಎಂಬ ಆರೋಪವೂ ಅವರ ಮೇಲಿದೆ. ‘ದಲಿತ, ಬಂಜಾರ, ಮುಸ್ಲಿಂ, ಕುರುಬ ಸಮುದಾಯಗಳ ಮತಗಳ ಜೊತೆಗೆ ಲಿಂಗಾಯತ ಮತಗಳು ಲಭ್ಯವಾದರೆ ಗೆಲುವು ಸುಲಭ’ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

‘ಬಿಜೆಪಿ ಅಭ್ಯರ್ಥಿ ಸುನೀಲ್‌ ವಲ್ಲ್ಯಾಪುರ ಒಂದು ಅವಧಿಗೆ ಶಾಸಕರಾಗಿದ್ದರು. ಸಚಿವರಾಗಿಯೂ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಮೇಲೆ ಅವರು ಹಿಡಿತವನ್ನೂ ಹೊಂದಿದ್ದಾರೆ. ಯಡಿಯೂರಪ್ಪ ಅವರ ಬಲಗೈ ಬಂಟನಂತಿರುವ ಅವರು, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಯಡಿಯೂರಪ್ಪ ಅವರ ಕಾರಣಕ್ಕೆ ಜಾತಿ ಬಲ ಮತ್ತು ಮೋದಿ ಅಲೆ ಅವರನ್ನು ದಡ ಸೇರಿಸುತ್ತದೆ’ ಎನ್ನುವುದು ಬಿಜೆಪಿ ಲೆಕ್ಕಾಚಾರ.

‘ಟಿಕೆಟ್‌ ಕೈತಪ್ಪಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ ಯಾಕಾಪುರ ಅವರು ಕ್ಷೇತ್ರದಲ್ಲಿ ಸಕ್ರಿಯರಾಗಿಲ್ಲ. ಪಕ್ಕದ ಸೇಡಂ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ಮೂಲ ಬಿಜೆಪಿಗರು ಮುನಿಸಿಕೊಂಡಿರುವುದು ಬಿಜೆಪಿ ಅಭ್ಯರ್ಥಿಗೆ ಸ್ವಲ್ಪ ಹಿನ್ನಡೆ ಆಗಬಹುದು’ ಎಂಬ ಮಾತೂ ಕೇಳಿಬರುತ್ತಿದೆ.

ಆದರೆ, ಇದನ್ನು ಬಿಜೆಪಿ ಕಾರ್ಯಕರ್ತರು ಒಪ್ಪಲ್ಲ. ‘ಪೇಜ್‌ ಪ್ರಮುಖರ ಮೂಲಕ ಪ್ರತಿ ಮತದಾರರನ್ನು ತಲುಪಿದ್ದೇವೆ. ಅಚ್ಚರಿಯ ಫಲಿತಾಂಶ ನಿಶ್ಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜೆಡಿಎಸ್‌ ಅಭ್ಯರ್ಥಿ ಸುಶೀಲಾಬಾಯಿ ಕೊರವಿ ಅವರು ಶಿಕ್ಷಕಿಯಾಗಿದ್ದರು. ಸ್ವಯಂ ನಿವೃತ್ತಿ ಪಡೆದು ಇದೇ ಮೊದಲ ಬಾರಿ ರಾಜಕೀಯ ಕಣಕ್ಕೆ ಧುಮುಕಿದ್ದಾರೆ.

‘ಅವರ ಪ್ರಚಾರದ ಅಬ್ಬರ ಆರಂಭದಲ್ಲಿ ಹೆಚ್ಚಾಗಿತ್ತು. ಈಗ ಅಷ್ಟಾಗಿ ಇಲ್ಲ. ಅವರು ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಸೇರಿದವರು. ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟರ ಮಟ್ಟಿಗೆ ತಮ್ಮ ಸಮುದಾಯದ ಮತ ಸೆಳೆಯಬಲ್ಲರೇ’ ಎಂಬ ಚರ್ಚೆಯೂ ಕ್ಷೇತ್ರದಲ್ಲಿ ಜೋರಾಗಿದೆ.

ಮತಗಟ್ಟೆ: 240
ಮತದಾರರು
ಪುರುಷ :97,243
ಮಹಿಳಾ:93,718
ತೃತೀಯಲಿಂಗಿಗಳು: 15
ಒಟ್ಟು: 1,90,976

ಇತರ ಅಭ್ಯರ್ಥಿಗಳು

ಶ್ರೀಕಾಂತ ಮಾಣಿಕರಾವ್‌ (ಡಾ.ಎ.ಪಿ.ಪಿ), ವಿಜಯಲಕ್ಷ್ಮಿ ಲಕ್ಷ್ಮಣ ಓಂಕಾರ (ಎಐಎಂಇಪಿ), ಬಸವರಾಜ ಮಲ್ಲಯ್ಯ ವಾಡಿ (ಭಾರತೀಯ ಹೊಸ ಕಾಂಗ್ರೆಸ್‌), ಗೌತಮ ಮಾಣಿಕ ಮೋರೆ (ನಮ್ಮ ಕಾಂಗ್ರೆಸ್‌), ಶಂಕರ ಜಾಧವ (ಬಿಪಿಪಿ), ಬಸವರಾಜ ಅನ್ವರಕರ್‌ ಮತ್ತು ಮಿಥುನ್ ಖೇಮು ರಾಠೋಡ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.