ADVERTISEMENT

‘ಕೈ’, ‘ಕಮಲ’ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2018, 6:58 IST
Last Updated 16 ಮೇ 2018, 6:58 IST

ಕಲಬುರ್ಗಿ: ವಿಜೇತ ಅಭ್ಯರ್ಥಿಗಳ ಪರ ಜಯಘೋಷ. ಮೋದಿ ಮೋದಿ ಎಂದು ಕೂಗಿದ ಬಿಜೆಪಿ ಕಾರ್ಯಕರ್ತರು. ಸಿಹಿ ಹಂಚಿ ಸಂಭ್ರಮ. ಬೆಂಬಲಿಗರಿಂದ ಶುಭಾಶಯ ವಿನಿಮಯ. ಇವು ಗುಲಬರ್ಗಾ  ವಿಶ್ವವಿದ್ಯಾಲಯದ ಒಳ ಮತ್ತು ಹೊರ ಆವರಣದಲ್ಲಿ ಮಂಗಳವಾರ ಕಂಡು ಬಂದ ದೃಶ್ಯ.

ಒಂದೊಂದು ಮತಕ್ಷೇತ್ರದ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ವಿಜೇತರ ಪರ ಬೆಂಬಲಿಗರು, ಕಾರ್ಯಕರ್ತರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ, ಜೇವರ್ಗಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯಸಿಂಗ್ ಅವರನ್ನು ಹೆಗಲು ಮೇಲೆ ಹೊತ್ತುಕೊಂಡು ಘೋಷಣೆ ಕೂಗಿದರು.

ಮತ ಎಣಿಕೆ ಕೇಂದ್ರದ ಬಳಿ ಕಾರ್ಯಕರ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದಾಗ್ಯೂ ಪೊಲೀಸರ ಕಣ್ಣು ತಪ್ಪಿಸಿ ಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡರು. ಘೋಷಣೆ ಕೂಗದಂತೆ ಪೊಲೀಸರು ಹಲವಾರು ಬಾರಿ ಸೂಚಿಸಿದರೂ ಕಾರ್ಯಕರ್ತರು ಕೇಳಲಿಲ್ಲ. ಬದಲಿಗೆ ಜಯಘೋಷ ಹಾಕಿದರು.

ADVERTISEMENT

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಸಾಗಿದ ಕಾರು, ಬೈಕ್‌ಗಳ ಮೇಲೆ ಪಕ್ಷದ ಬಾವುಟಗಳು ರಾರಾಜಿಸಿದವು.

ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ ಡಾ.ಉಮೇಶ ಜಾಧವ್, ಅಫಜಲಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ, ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಕಣ್ಣೀರಾದ ಫಾತಿಮಾ...

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಕಲಬುರ್ಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತಿಮಾ ಅವರು ಮತ ಎಣಿಕೆ ಕೇಂದ್ರಕ್ಕೆ ಬಂದರು. ಆಗ ನೆರೆದಿದ್ದ ಕಾರ್ಯಕರ್ತರು ‘ಖಮರುಮ್ ಇಸ್ಲಾಂ ಜಿಂದಾಬಾದ್’, ‘ಭಾಬಿ ಮಾ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ವೇಳೆ ಫಾತಿಮಾ ಅವರು ಪತಿ ದಿವಂಗತ ಖಮರುಲ್ ಅವರನ್ನು ನೆನೆಸಿಕೊಂಡು ಕಣ್ಣೀರಾದರು. ಮಾಧ್ಯಮಗಳ ಜತೆ ಮಾತನಾಡುತ್ತಿದ್ದಾಗ ಗದ್ಗದಿತರಾದರು.

ಕಾರ್ಯಕರ್ತರಿಗೆ ಲಾಠಿ ರುಚಿ

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರವೇಶದ್ವಾರದ ಮುಂದೆ ವಿಜಯೋತ್ಸವ ಆಚರಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.ಇದಾದ ಬಳಿಕ ಮತ್ತೆ ಸೇರಿದ ಕಾರ್ಯಕರ್ತರು ಕನೀಜ್ ಫಾತಿಮಾ ಪರ ಘೋಷಣೆ ಕೂಗಿದರು. ಬೈಕ್ ರ್‍ಯಾಲಿಯಲ್ಲಿ ಸಾಗಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.