ADVERTISEMENT

ಕೊಚ್ಚಿ ಹೋದ ಕಮಲಾವತಿ ನದಿ ಸೇತುವೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:35 IST
Last Updated 12 ಅಕ್ಟೋಬರ್ 2017, 10:35 IST

ಸೇಡಂ: ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಕಮಲಾವತಿ ನದಿಗೆ ನಿರ್ಮಿಸಲಾದ ಸೇತುವೆ ಮಳೆಯಲ್ಲಿ ಕೊಚ್ಚಿಹೋಗಿದೆ.

ತಾಲ್ಲೂಕಿನ ವಿವಿಧೆಡೆಗಳಿಂದ ಹರಿದು ಬಂದ ಮಳೆ ನೀರು ಕಮಲಾವತಿ ನದಿಗೆ ಸೇರ್ಪಡೆಯಾಗಿದೆ. ಅಲ್ಲದೆ, ಪಟ್ಟಣದಲ್ಲಿನ ಚರಂಡಿ ನೀರು, ನಾಲೆಯ ನೀರು, ಮಳೆ ನೀರು, ಹಳ್ಳ, ನಾಲೆಗಳಿಂದ ಹರಿದು ಬಂದ ನೀರು ಕಮಲಾವತಿ ನದಿಗೆ ಸೇರ್ಪಡೆಯಾಗಿ ನದಿಯ ನೀರಿನ ಹರಿಯುವ ಮಟ್ಟ ಹೆಚ್ಚಿ ಸೇತುವೆ ಕೊಚ್ಚಿ ಹೋಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುಮಾರು ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಮಲಾವತಿ ಸೇತುವೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಕಳೆದ ಜುಲೈ 25ರಂದು ಲೋಕಾರ್ಪಣೆಗೊಳಿಸಿದ್ದರು. ಸೇತುವೆ ನಿರ್ಮಾಣಗೊಂಡ 4 ತಿಂಗಳಲ್ಲಿ ನದಿ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಜನರಿಗೆ ಹೊಲಗದ್ದೆಗಳಿಗೆ ತೆರಳಲು ಹಾಗೂ ಕೃಷಿ ಚಟುವಟಿಕೆಯ ಕೆಲಸಗಳಿಗೆ ತೊಂದರೆಯಾಗಿದೆ.

ADVERTISEMENT

‘ಈ ಮೊದಲೂ ಸೇತುವೆ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿತ್ತು. ಈದೀಗ ಎರಡನೇ ಬಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಕಳಪೆ ಮಟ್ಟದ ಕಾಮಗಾರಿಯೇ ಸೇತುವೆ ಕೊಚ್ಚಿಹೋಗಲು ಕಾರಣ’ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗುಣಮಟ್ಟದ ಕಾಮಗಾರಿ ಮಾಡಿದ್ದರೆ, ಸೇತುವೆ ಒಡೆದು ಹೋಗುತ್ತಿರಲಿಲ್ಲ. ಸರ್ಕಾರ ಗುಣಮಟ್ಟ ಕಾಯ್ದುಕೊಂಡು ಸೇತುವೆ ನಿರ್ಮಿಸಿ ಅನುಕೂಲ ಕಲ್ಪಿ ಸಬೇಕು’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಮಂತ ಅವಂಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.