ADVERTISEMENT

ಕೋಟಿ ಸುರಿದರೂ ನೀರಿಗಾಗಿ ತಪ್ಪದ ಪರದಾಟ

ಬಂದರವಾಡ: 2004ರಲ್ಲಿ ಯೋಜನೆ ಮಂಜೂರಾತಿ, ₹ 1.30 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 3 ಮೇ 2017, 9:32 IST
Last Updated 3 ಮೇ 2017, 9:32 IST
ಅಫಜಲಪುರ ತಾಲ್ಲೂಕಿನ ಬಂದರವಾಡದಲ್ಲಿ ಜಲ ನಿರ್ಮಲ ಯೋಜನೆಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್‌ 8 ವರ್ಷಗಳಿಂದ ಉಪಯೋಗವಿಲ್ಲದೆ ಹಾಳಾಗುತ್ತಿದೆ.
ಅಫಜಲಪುರ ತಾಲ್ಲೂಕಿನ ಬಂದರವಾಡದಲ್ಲಿ ಜಲ ನಿರ್ಮಲ ಯೋಜನೆಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್‌ 8 ವರ್ಷಗಳಿಂದ ಉಪಯೋಗವಿಲ್ಲದೆ ಹಾಳಾಗುತ್ತಿದೆ.   

ಅಫಜಲಪುರ: ವಿಶ್ವ ಬ್ಯಾಂಕ್‌ ನೆರವಿನ ಜಲ ನಿರ್ಮಲ ಯೋಜನೆ ಅಡಿ ₹ 1.30 ಕೋಟಿ ಅನುದಾನದಲ್ಲಿ ಭೀಮಾ ನದಿಯಿಂದ ತಾಲ್ಲೂಕಿನ ಬಂದರವಾಡ ಗ್ರಾಮಕ್ಕೆ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರಿಗಾಗಿ 2008ರಲ್ಲಿ ಕಾಮಗಾರಿ ಆರಂಭವಾದರೂ ಇದುವರೆಗೂ ಕೆಲಸ ಮುಗಿಯದೆ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಭೀಮಾನದಿಯಿಂದ ಪೈಪ್‌ಲೈನ್ ಮುಖಾಂತರ ಗ್ರಾಮದ ಹೊರವಲಯದ  ನೀರಿನ ಟ್ಯಾಂಕ್‌ ಮತ್ತು ಶುದ್ಧಿಕರಣ ಘಟಕಕ್ಕೆ ನೀರು ಪೂರೈಸಿ, ಆ ಮೂಲಕ ಗ್ರಾಮಕ್ಕೆ ಕುಡಿಯಲು ನೀರು ಸರಬರಾಜು ಮಾಡಲು ಸರ್ಕಾರ ಜಲ ನಿರ್ಮಲ ಯೋಜನೆ ಅಡಿ ಉದ್ದೇಶಿಸಿತ್ತು.

ಈ ಯೋಜನೆಯಡಿ ₹ 1.30 ಕೋಟಿ ಮತ್ತು ಭಾರತ ನಿರ್ಮಾಣದಲ್ಲಿ ₹ 10.50 ಲಕ್ಷ ನೀಡಲಾಗಿತ್ತು. 8 ವರ್ಷ ಕಳೆಯುತ್ತಾ ಬಂದರೂ ನದಿಯ ನೀರು ಟ್ಯಾಂಕ್‌ಗೆ ಹರಿದುಬಂದಿಲ್ಲ ಎಂದು ಹೇಳಲಾಗಿದೆ.

ಸರ್ಕಾರ ಸಾಕಷ್ಟು ಹಣ ನೀಡಿದರೂ, ಅಪೂರ್ಣ ಕಾಮಗಾರಿ ಮತ್ತು ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಿ ಗ್ರಾಮದ ಜನರಿಗೆ ನೀರು ಕುಡಿಸುವ ವ್ಯವಸ್ಥೆ ಮಾಡಬೇಕೆಂದು ಬಂದರವಾಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಯೋಜನೆ ಇಷ್ಟು ವರ್ಷ ಕಳೆದರೂ ಏಕೆ ಪೂರ್ಣವಾಗಿಲ್ಲ ಎಂಬುದರ ಬಗ್ಗೆ ಇದುವರೆಗೂ ವಿಶ್ವ ಬ್ಯಾಂಕ್‌ ಅಧಿಕಾರಿಗಳಾಗಲಿ, ಜಲ ನಿರ್ಮಲ ಇಲಾಖೆ ಅಧಿಕಾರಿಗಳಾಗಲಿ ವಿಚಾರಣೆ ಮಾಡದೆ ಇರುವುದು ದುರಂತವಾಗಿದೆ.

ಕುಡಿಯುವ ನೀರಿನ ಯೋಜನೆಗಳನ್ನು ನೋಡಿಕೊಳ್ಳುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಎಇಇ ಅವರು ಇದುವರೆಗೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಗಳಲ್ಲಿ ಈ ಭಾಗದಿಂದ ಆಯ್ಕೆಯಾಗಿರುವ ಸದಸ್ಯರು ಧ್ವನಿ   ಎತ್ತದೆ ಇರುವುದು ನೋಡಿದರೆ ಯಾರಿಗೂ ಯೋಜನೆ ಬಗ್ಗೆ ಆಸಕ್ತಿ ಇದ್ದಂತಿಲ್ಲ ಎಂದು ಗ್ರಾಮಸ್ಥರಾದ ಗುಂಡು ನಾಗಠಾಣ, ರಾಜು ಭಜಂತ್ರಿ ಆರೋಪಿಸಿದ್ದಾರೆ.
-ಶಿವಾನಂದ ಹಸರಗುಂಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.