ADVERTISEMENT

ಖುಷಿ, ಜವಾಬ್ದಾರಿ ಹೆಚ್ಚಿಸುವ ವಿಶೇಷ ಹಬ್ಬ ರಂಜಾನ್‌...

ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬ, ಭಕ್ಷ್ಯಗಳ ಸವಿಯುವ ಸಂತಸ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:56 IST
Last Updated 16 ಜೂನ್ 2018, 8:56 IST

ರಂಜಾನ್ ಮುಸ್ಲಿಮರ ಪಾಲಿಗೆ ದೊಡ್ಡ ಹಬ್ಬ. ಮಹಿಳೆಯರಿಗೆ ಖುಷಿಯ ಜತೆಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂಬುದು ವಿಶೇಷ. ರಂಜಾನ್‌ ಸಮಯದಲ್ಲಿ ಒಂದು ತಿಂಗಳು ಉಪವಾಸ (ರೋಜಾ) ಆಚರಿಸುತ್ತೇವೆ. ಉಪವಾಸ ಆರಂಭದ ದಿನದಿಂದ ನಮ್ಮ ದಿನಚರಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತವೆ. ಆದಾಗ್ಯೂ ಕಟ್ಟುನಿಟ್ಟಾಗಿ ಪಾಲಿಸುತ್ತೇವೆ.

ಬೆಳಿಗ್ಗೆ 3 ಗಂಟೆಗೇ ದಿನಚರಿ ಪ್ರಾರಂಭವಾಗುತ್ತದೆ. ಊಟಕ್ಕೆ ಗುಲ್‌ಗುಲೆ, ತಹರಿ, ಭಜ್ಜಿ, ಗುಲಾಬ್ ಜಾಮೂನ್.. ಹೀಗೆ ತರಹೇವಾರಿ ಅಡುಗೆಗಳನ್ನು ಸಿದ್ಧಪಡಿಸುತ್ತೇವೆ. ಬೆಳಿಗ್ಗೆ 4.30ಗಂಟೆಗೆ ಸೈರನ್‌ ಮೊಳಗುವ ಹೊತ್ತಿಗೆ ಊಟ (ಸಹರಿ) ಮಾಡುತ್ತೇವೆ. ಆ ಬಳಿಕ ಮಂತ್ರ ಪಠಣ ಮಾಡಿ, ನಮಾಜ್‌ ಮಾಡುತ್ತೇವೆ.

ರಂಜಾನ್ ತಿಂಗಳಲ್ಲಿ ಪ್ರತಿದಿನ 5 ಬಾರಿ ಪ್ರಾರ್ಥನೆ (ನಮಾಜ್) ಸಲ್ಲಿಸಬೇಕು. ಈ ವಿಷಯದಲ್ಲಿ ಮಹಿಳೆಯರಿಗೆ ನಿಯಮ ಸಡಿಲ ಇವೆ. ಮಹಿಳೆಯರೆಲ್ಲರೂ ಒಂದೆಡೆ ಸೇರಿ ಪ್ರತ್ಯೇಕವಾಗಿ ನಮಾಜ್‌ ಮಾಡುವುದು ಖುಷಿ ಕೊಡುತ್ತದೆ. ಏಳು ವರ್ಷ ವಯಸ್ಸು ಮೇಲ್ಪಟ್ಟವರೆಲ್ಲ ರೋಜಾ ಮಾಡುವ ನಿಯಮವಿದೆ. ಹಾಗಂತ ಎಲ್ಲರೂ ಉಪವಾಸ ಮಾಡಬೇಕು ಎಂಬ ನಿಯಮವಿಲ್ಲ. ಚಿಕ್ಕ ಮಕ್ಕಳಿರುವ ತಾಯಂದಿರು, ವಯಸ್ಸಾದವರು, ಅನಾರೋಗ್ಯ ದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ರೋಜಾ ಮಾಡುವುದಿಲ್ಲ.

ADVERTISEMENT

ಪ್ರತಿ ನಿತ್ಯ ಸಂಜೆ 7 ಗಂಟೆಯ ನಮಾಜ್ ಬಳಿಕ ಇಫ್ತಾರ್‌ ಕೂಟ ಏರ್ಪಡಿಸುತ್ತೇವೆ. ಅಕ್ಕ–ಪಕ್ಕದ ಜನರು, ಸಂಬಂಧಿಕರು, ಸ್ನೇಹಿತರು ಎಲ್ಲರೂ ಸೇರಿ ಖರ್ಜೂರ ತಿನ್ನುವ ಮೂಲಕ ಉಪವಾಸ ಬಿಡುತ್ತೇವೆ. ಈ ಸಂದರ್ಭದಲ್ಲಿ ಹೆಚ್ಚಾಗಿ ಹಣ್ಣುಗಳನ್ನು ಮತ್ತು ಸಿಹಿ ತಿಂಡಿಗಳನ್ನು ಸೇವಿಸುತ್ತೇವೆ. ರಾತ್ರಿ 8 ಗಂಟೆ ನಮಾಜ್‌ ಬಳಿಕ ಬಿರಿಯಾನಿ, ತಹರಿ ಸೇರಿದಂತೆ ಇಷ್ಟದ ಖಾದ್ಯಗಳನ್ನು ಸವಿಯುತ್ತೇವೆ.

ಚಾಂದ್‌ ರಾತ್ರಿಯ ದಿನ ಬಟ್ಟೆ, ಬ್ಯಾಗ್, ಚಪ್ಪಲಿ ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಕಡಿಮೆ ಇರುತ್ತದೆ. ಹೀಗಾಗಿ ಅಂದು ಖರೀದಿ ಭರಾಟೆ ಜೋರಾಗಿರುತ್ತದೆ. ಈದ್‌ ಉಲ್‌ ಫಿತ್ರ್‌ದಂದು ಉಪವಾಸ ಮಾಡುವುದಿಲ್ಲ. ಹೊಸ ಬಟ್ಟೆ ಧರಿಸಿ ನಮಾಜ್‌ ಮಾಡುತ್ತೇವೆ. ಬಡವರಿಗೆ ಬಟ್ಟೆ, ದುಡ್ಡು, ಅಡುಗೆ ಸಾಮಗ್ರಿಗಳನ್ನು ಕೈಲಾದಷ್ಟು ದಾನ ಮಾಡುತ್ತೇವೆ. ನಂತರ ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಊಟ ಬಡಿಸುತ್ತೇವೆ.

ಚಿಕ್ಕ ಮಕ್ಕಳಿಗೆ ಮನೆಯ ಹಿರಿಯರು ದುಡ್ಡು ಕೊಡುತ್ತಾರೆ. ಅಂದು ದಿನವಿಡೀ ಮನೆಯಲ್ಲಿ ಸಂಭ್ರಮ. ಸ್ನೇಹಿತರು, ಬಂಧುಗಳು ಹಾಗೂ ಅಕ್ಕ–ಪಕ್ಕದ ಮನೆಯವರಿಗೆ ಶೀರ್‌ಕುರ್ಮಾ (ಸುರಕುಂಬಾ) ಹಂಚುತ್ತೇವೆ. ಮಧ್ಯಾಹ್ನ ಊಟ ಸವಿದು ರೋಜಾ ಮುಕ್ತಾಯಗೊಳಿಸುತ್ತೇವೆ
ಅಮ್ರೀನ್‌ ಬೇಗಂ ಖಾಜಾಮಿಯಾ ಮುಲ್ಲಾ, ಶಿಕ್ಷಕಿ, ಕಲಬುರ್ಗಿ

ಕೊನೆಯ ಮೂರು ದಿನ ವಿಶೇಷ

ರಂಜಾನ್‌ ಹಬ್ಬದ ಕೊನೆಯ ಮೂರು ದಿನ ವಿಶೇಷವಾಗಿರುತ್ತದೆ. ಕೊನೆಯ ಶುಕ್ರವಾರ (ಅಲ್‌ವಿದಾ) ಹಬ್ಬದ ಮುಕ್ತಾಯದ ದಿನ. ಅಂದು ಮನೆಯವರೆಲ್ಲರೂ ಹೊಸ ಬಟ್ಟೆ ಧರಿಸಿ, ವಿಶೇಷ ಅಡುಗೆ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತೇವೆ.

ಹಬ್ಬದ ಮುನ್ನಾ ದಿನ ಚಂದ್ರ ಕಂಡರೆ ಮಾತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಇಡೀ ರಾತ್ರಿ ಮನೆ ಹಾಗೂ ಮಾರುಕಟ್ಟೆಯಲ್ಲಿ ಲವಲವಿಕೆ ಕಂಡು ಇರುತ್ತದೆ. ಅದರಲ್ಲೂ ಮಹಿಳೆಯರಿಗೆ ಕೈತುಂಬ ಕೆಲಸ. ಮೆಹಂದಿ ಹಚ್ಚಿಕೊಳ್ಳುವುದು, ಇಷ್ಟವಾದ ಬಟ್ಟೆ, ಆಲಂಕಾರಿಕ ವಸ್ತುಗಳನ್ನು ಖರೀದಿಸುವ ಖುಷಿ ಹೇಳತೀರದು.

(ನಿರೂಪಣೆ: ಭಾಗ್ಯ ಆರ್‌.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.