ADVERTISEMENT

ಚಿಂಚೋಳಿ: 5 ಕಡೆಗಳಲ್ಲಿ ಹೆಲ್ಮೆಟ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:30 IST
Last Updated 6 ಡಿಸೆಂಬರ್ 2017, 8:30 IST

ಚಿಂಚೋಳಿ: ಕಾರು ಚಾಲಕರು ಸೀಟ್‌ಬೆಲ್ಟ್‌ ಮತ್ತು ಬೈಕ್‌ ಸವಾರರು ಹೆಲ್ಮೆಟ್‌ ಧರಿಸುವುದು ಕಡ್ಡಾಯಗೊಳಿಸಿದ್ದರಿಂದ ತಾಲ್ಲೂಕಿನಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಹೆಲ್ಮೆಟ್‌ ಮಾರಾಟದ ಭರಾಟೆ ಜೋರಾಗಿ ಸಾಗಿದೆ.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ, ಚಂದಾಪುರ ಮತ್ತು ಚಿಂಚೋಳಿ ರಸ್ತೆ ಹಾಗೂ ನ್ಯಾಯಾಲಯದ ಎದುರುಗಡೆ ರಸ್ತೆ ಬದಿಯಲ್ಲಿ ಹೆಲ್ಮೆಟ್‌ಗಳಿಟ್ಟು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಹೆಲ್ಮೆಟ್‌ ಮಾರಾಟಕ್ಕೆ ಬಿಹಾರಿಗಳು ಬಂದಿದ್ದು ಮೂರು ಸ್ಥಳಗಳಲ್ಲಿ ಮಾರಾಟಕ್ಕೆ ಕುಳಿತಿದ್ದಾರೆ. ಒಂದು ಕಡೆ ಪಟ್ಟಣದ ವ್ಯಕ್ತಿಯೊಬ್ಬರು ಮಾರಾಟದಲ್ಲಿ ತೊಡಗಿದ್ದಾರೆ. ₹300ರಿಂದ ₹600ವರೆಗಿನ ಹೆಲ್ಮೆಟ್‌ ಇವರ ಬಳಿ ಮಾರಾಟಕ್ಕಿವೆ.

ADVERTISEMENT

ಬೈಕ್‌ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂರು ದಿನಗಳಲ್ಲಿ 400 ಹೆಲ್ಮೆಟ್‌ ಮಾರಾಟ ಮಾಡಿರುವುದಾಗಿ ಎಂದು ಮನೋಹರ ಪಸ್ತಪುರ ‘ಪ್ರಜಾವಾಣಿ’ಗೆ ತಿಳಿಸಿದರು.

2 ದಿನಗಳಿಂದ ಬಿಹಾರದ ರಾಜೇಶ್‌ ಮತ್ತು ಸಿಕಂದರ್‌ ಹೆಲ್ಮೆಟ್‌ ಮಾರಾಟದಲ್ಲಿ ತೊಡಗಿದ್ದು, ನಿತ್ಯ 20ರಿಂದ 25 ಹೆಲ್ಮೆಟ್‌ ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಕಳೆದ 5 ದಿನಗಳಲ್ಲಿ ಪಟ್ಟಣದಲ್ಲಿ 500ಕ್ಕೂ ಅಧಿಕ ಹೆಲ್ಮೆಟ್‌ ಮಾರಾಟವಾಗಿವೆ ಎಂದು ಮಾರಾಟಗಾರರು ಹೇಳಿದರು.

‘ಪಟ್ಟಣದಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ ಪೊಲೀಸರ ನಿಲುವು ಅತ್ಯಂತ ಸ್ವಾಗತಾರ್ಹ. ಜನರ ಹಿತರಕ್ಷಣೆಗೆ ಹಾಗೂ ಅಪಘಾತಗಳಿಂದ ಜೀವ ಉಳಿಸಲು ಹೆಲ್ಮೆಟ್‌ ಧರಿಸುವುದು ಸುರಕ್ಷಿತವಾದ ಕ್ರಮ’ ಎಂದು ಸಾಮಾಜಿಕ ಕಾರ್ಯಕರ್ತ ಶೇಖ್‌ ಭಕ್ತಿಯಾರ್‌ ಜಹಾಗೀರದಾರ್‌ ತಿಳಿಸಿದರು.

‘ಹೆಲ್ಮೆಟ್‌ ಕಡ್ಡಾಯ ಹಾಗೂ ಸಂಚಾರ ನಿಯಮಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿವೆ. ಜನರ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಪ್ರತಿಯೊಬ್ಬ ಬೈಕ್‌ ಮಾಲೀಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಓಡಿಸಬೇಕು. ಕಾರು ಚಾಲಕರು ಸೀಟ್‌ಬೆಲ್ಟ್‌ ಧರಿಸಬೇಕು’ ಎಂದು ಡಿವೈಎಸ್ಪಿ ಯು.ಶರಣಪ್ಪ ತಿಳಿಸಿದ್ದಾರೆ.

ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿ ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೆಲ್ಮೆಟ್‌ ಧರಿಸಿದ್ದು ಗೋಚರಿಸುತ್ತಿತ್ತು. ಆದರೆ, ಈಗ ಶೇ 50ಕ್ಕೂ ಹೆಚ್ಚು ಮಂದಿ ವಾಹನ ಸವಾರರು ಹೆಲ್ಮೆಟ್‌ ಧರಿಸಿದ್ದು ಕಾಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.