ADVERTISEMENT

ಚಿತ್ರಕಲೆ ಅಧ್ಯಯನದಿಂದ ವಿಪುಲ ಅವಕಾಶ

ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಲಾವಿದರಿಗೆ ಹೆಚ್ಚಿನ ಬೇಡಿಕೆ

ರಾಹುಲ ಬೆಳಗಲಿ
Published 1 ಜೂನ್ 2017, 11:11 IST
Last Updated 1 ಜೂನ್ 2017, 11:11 IST
ಚಿತ್ರಕಲೆ ಅಧ್ಯಯನದಿಂದ ವಿಪುಲ ಅವಕಾಶ
ಚಿತ್ರಕಲೆ ಅಧ್ಯಯನದಿಂದ ವಿಪುಲ ಅವಕಾಶ   

ಕಲಬುರ್ಗಿ: ‘ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಪೂರ್ಣಗೊಳಿಸಿದ ಕೂಡಲೇ ಬಹುತೇಕ ಮಂದಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ಪದವಿಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ ಈ ಮೂರು ಅಲ್ಲದೇ ಚಿತ್ರಕಲೆ, ಗ್ರಾಫಿಕ್ಸ್ ಕಲೆ ಮತ್ತು ಪೂರಕ ವಿಷಯಗಳು ಕೂಡ ಉಪಯುಕ್ತ. ಅವುಗಳಿಂದಲೂ ವಿಪುಲ ಉದ್ಯೋಗಾವಕಾಶಗಳಿವೆ’ ನಗರದ ದಿ ಐಡಿಯಲ್‌ ಫೈನ್ ಆರ್ಟ್‌ ಟ್ರಸ್ಟ್‌ನ ನಿರ್ದೇಶಕ ಪ್ರೊ.ವಿ.ಜಿ. ಅಂದಾನಿ ಹೇಳುತ್ತಾರೆ.

ಚಿತ್ರಕಲೆ ಮತ್ತು ಅದಕ್ಕೆ ಪೂರಕವಾದ ವಿಷಯಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿದ್ದಲ್ಲಿ, ಹೊಸ ಸಂಗತಿಗಳನ್ನು ಅರಿಯಬಹುದು. ಚಿತ್ರಕಲಾ ಕ್ಷೇತ್ರದಲ್ಲಿ ಪರಿಣತಿ ಗಳಿಸಿ, ಖ್ಯಾತಿಯ ಜೊತೆಗೆ ಉತ್ತಮ ಆದಾಯ ಗಳಿಸಬ ಹುದು ಎಂಬದು ಅವರ ಅಭಿಪ್ರಾಯ.

ವಿಜ್ಞಾನ, ವಾಣಿಜ್ಯ ಮತ್ತು ಕಲಾ ವ್ಯಾಸಂಗ ಮಾಡಿದರೆ ಮಾತ್ರವೇ ಪದವಿ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯಲ್ಲಿ ಬಹುತೇಕ ಮಂದಿ ಆಯಾ ಕಾಲೇಜು­ಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸು­ತ್ತಾರೆ. ಆದರೆ ಅವುಗಳಿಗೆ ಸಮಾನವಾಗಿ ಚಿತ್ರಕಲೆ, ಗ್ರಾಫಿಕ್ಸ್‌, ಛಾಯಾಚಿತ್ರ, ಶಿಲ್ಪಕಲೆ ಅಧ್ಯಯನ ಮಾಡಿ ದೃಶ್ಯಕಲೆಯ ಪದವಿ ಗಳಿಸಬಹುದು.

‘ದೃಶ್ಯಕಲೆ ಪದವೀಧರರು ಶಾಲಾ ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ಸೀಮಿತರಾಗದೇ ಬಹುರಾಷ್ಟ್ರೀಯ ಸಾಫ್ಟ್‌­ವೇರ್‌ ಮತ್ತು ಅನಿಮೇಷನ್ ಕಂಪೆನಿ, ಜಾಹೀರಾತು ಸಂಸ್ಥೆಯಲ್ಲಿ ಕಲಾವಿದರಾಗಿ ಸೇರಬಹುದು. ಕಲಾ ನೈಪುಣ್ಯತೆಯಿಂದ ಸ್ವ–ಉದ್ಯೋಗ ಕಂಡು­ಕೊ­ಳ್ಳಬಹುದು.

ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿ, ಅವುಗಳನ್ನು ಕಲಾಸಕ್ತರಿಗೆ ಮಾರಲೂಬಹುದು’ ಎಂದು ಎಂಎಂಕೆ ದೃಶ್ಯಕಲೆ ಕಾಲೇಜಿನ ಪ್ರಾಚಾರ್ಯರಾದ ಪೂರ್ಣಿಮಾ ಪಾಟೀಲ ತಿಳಿಸಿದರು.

ದೃಶ್ಯ ಕಲೆ ಪದವಿ ಪೂರ್ಣಗೊಳಿಸಿ­ರುವ ನಗರದ ಬಹುತೇಕ ಮಂದಿ ದೇಶದ ವಿವಿಧೆಡೆ ಅಲ್ಲದೇ ವಿದೇಶಗ­ಳಲ್ಲೂ ವಿವಿಧ ಹುದ್ದೆಗಳಲ್ಲಿ ಕಾರ್ಯ­ನಿರ್ವಹಿಸುತ್ತಿದ್ದಾರೆ. ಉದ್ಯೋಗಾವಕಾಶ ಕಂಡುಕೊಳ್ಳಲು ಬಹುತೇಕ ಮಂದಿಗೆ ಅಂತರ್ಜಾಲ ನೆರವಾಗಿದ್ದರೆ, ಕೆಲವರಿಗೆ ಹಿರಿಯ, ತಜ್ಞ ಕಲಾವಿದರ ಮಾರ್ಗದರ್ಶನ ದೊರೆತಿದೆ.

ಕಲಿಕೆ ಅವಧಿಯಲ್ಲಿ ವಿದ್ಯಾರ್ಥಿಗಳು ಚಿತ್ರ ಬಿಡಿಸುವುದು ಅಷ್ಟೇ ಅಲ್ಲ, ಕಲಾ ಶಿಬಿರಗಳಲ್ಲಿ ಪಾಲ್ಗೊಳ್ಳುವಿಕೆ, ಸಾಂಪ್ರ­ದಾ­ಯಿಕ ಕಲೆ, ಹೊರಾಂಗಣ ಚಿತ್ರಕಲಾ ಶಿಬಿರ, ಗ್ರಾಫಿಕ್ಸ್‌, ಛಾಯಾಚಿತ್ರ, ಶಿಲ್ಪಕಲೆ ಮುಂತಾದವು­ಗಳಲ್ಲಿ ತರಬೇತಿ ಪಡೆ­ಯು­ತ್ತಾರೆ. ನಂತರ ವಿಷಯವೊಂದನ್ನು ಆಯ್ದುಕೊಂಡು ಪರಿಣತಿ ಸಾಧಿಸುತ್ತಾರೆ.

‘15 ವರ್ಷಗಳ ಹಿಂದೆ ಚಿತ್ರಕಲಾ ಶಿಕ್ಷಕ ಹುದ್ದೆಗೆ ಮಾತ್ರ ಆದ್ಯತೆ ಇತ್ತು. ಆದರೆ ಈಗ ಬಹಳಷ್ಟು ಬದಲಾವಣೆ­ಗಳಿವೆ. ಸ್ವತಃ ಪ್ರತಿಷ್ಠಿತ ಕಂಪೆನಿಗಳೇ ಪ್ರತಿಭಾವಂತ ಅಭ್ಯರ್ಥಿಗಳನ್ನು ಹುಡುಕಿ­­ಕೊಂಡು ಕಾಲೇಜುಗಳಿಗೆ ಬರುತ್ತಿವೆ. ಅತ್ಯುತ್ತಮ ವೇತನ ನೀಡು­ವುದರ ಜೊತೆ ಕಂಪೆನಿಗಳಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗುತ್ತಿದೆ’ ಎಂದು ಸಂಸ್ಥೆಯ ಪ್ರಾಚಾರ್ಯ ರಾಜಶೇಖರ ತಿಳಿಸಿದರು.

‘ಚಿತ್ರಕಲೆ ಮತ್ತು ಪೂರಕ ವಿಷಯ­ಗಳತ್ತ ಪೋಷಕರು ಗಮನಹರಿಸಬೇಕು. ಚಿತ್ರಕಲಾ ಅಧ್ಯಯ­ನದಿಂದಲೂ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊ­ಳ್ಳ­ಬಹುದು ಎಂಬುದು ಅವರಿಗೆ ಅರಿವಾಗಬೇಕು’ ಎಂದರು.

ADVERTISEMENT

****
ಪದವಿ, ಡಿಪ್ಲೊಮಾ...

ಎಂಎಂಕೆ ದೃಶ್ಯಕಲೆ ಕಾಲೇಜಿ ನಲ್ಲಿ ದೃಶ್ಯಕಲೆ ಪದವಿಗೆ (ಬಿವಿಎ–ನಾಲ್ಕು ವರ್ಷ) ಪ್ರವೇಶ ಪಡೆಯಲು ಪಿಯು ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರ­ಬೇಕು. ದೃಶ್ಯಕಲೆ ಸ್ನಾತಕೋತ್ತರ (ಎಂವಿಎ–ಎರಡು ವರ್ಷ) ಪ್ರವೇಶ ಪಡೆಯಲು ದೃಶ್ಯಕಲೆ ಅಥವಾ ಫೈನ್‌ಆರ್ಟ್ಸ್‌ ನಲ್ಲಿ ಪದವಿ ಪಡೆದಿರಬೇಕು. ಈ ಕಾಲೇಜು ಗುಲಬರ್ಗಾ ವಿಶ್ವವಿದ್ಯಾ ಲಯದ ಮಾನ್ಯತೆಗೆ ಒಳಪಟ್ಟಿದೆ.

ದಿ ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆಯಲ್ಲಿ ಡಿಪ್ಲೊಮಾ ಕೋರ್ಸ್‌ ಇದ್ದು, ಹಂಪಿಯ ಕನ್ನಡ ವಿಶ್ವವಿ­ದ್ಯಾಲ­ಯದ ಮಾನ್ಯತೆಗೆ ಒಳಪಟ್ಟಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪೂರ್ಣ ಗೊಳಿಸಿದ ವರಿಗೆ ಎರಡು ವರ್ಷ ದೃಶ್ಯಕಲಾ ಮೂಲದ ಬಗ್ಗೆ ತರಬೇತಿ ನೀಡಲಾಗುವುದು. 3 ವರ್ಷದ ವಿಶೇಷ ಪರಿಣತಿ ಚಿತ್ರಕಲೆ ಡಿಪ್ಲೊಮಾ ಕೋರ್ಸ್ ಕೂಡ ಲಭ್ಯ ವಿದೆ. ಛಾಯಾಚಿತ್ರ, ಸ್ಕ್ರೀನ್‌ ಪ್ರಿಂಟ್, ಪೋಸ್ಟರ್ ಡಿಸೈನ್, ಅನಿಮೇಷನ್, ಶಿಲ್ಪಕಲೆ ಮತ್ತು ಟೆರಾಕೊಟಾ ತರಬೇತಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.