ADVERTISEMENT

ಜನನಿಬಿಡ ರಸ್ತೆಯ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 6:37 IST
Last Updated 27 ಜನವರಿ 2016, 6:37 IST
ಕಲಬುರ್ಗಿಯ ಜಿಲ್ಲಾ ಕೋರ್ಟ್‌ ವೃತ್ತದಿಂದ ಎಸ್‌.ಬಿ. ಪೆಟ್ರೊಲ್‌ ಬಂಕ್‌ ಮಾರ್ಗದ ರಸ್ತೆಯ ಸಂಚಾರದ ನೋಟ
ಕಲಬುರ್ಗಿಯ ಜಿಲ್ಲಾ ಕೋರ್ಟ್‌ ವೃತ್ತದಿಂದ ಎಸ್‌.ಬಿ. ಪೆಟ್ರೊಲ್‌ ಬಂಕ್‌ ಮಾರ್ಗದ ರಸ್ತೆಯ ಸಂಚಾರದ ನೋಟ   

ಕಲಬುರ್ಗಿ: ನಗರದ ಹೃದಯಭಾಗ ದಲ್ಲಿರುವ ಜಿಲ್ಲಾ ನ್ಯಾಯಾಲಯ ವೃತ್ತದಿಂದ ಎಸ್‌.ಬಿ. ಪೆಟ್ರೊಲ್‌ ಬಂಕ್‌ ವರೆಗಿನ ರಸ್ತೆ ಮಾರ್ಗ ದಿನದಿಂದ ದಿನಕ್ಕೆ ಸಮಸ್ಯೆಗಳ ಆಗರವಾಗಿ ಮಾರ್ಪಡುತ್ತಿದೆ. ಈ ಬಗ್ಗೆ ದೂರು ನೀಡಿದರೂ ಪಾಲಿಕೆ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿಲ್ಲ.

ಕೇಂದ್ರ ಬಸ್‌ ನಿಲ್ದಾಣ ಹಾಗೂ ಜೇವರ್ಗಿ ಕ್ರಾಸ್‌ ಮಾರ್ಗದಿಂದ ಸೂಪರ್ ಮಾರ್ಕೆಟ್‌ ಕಡೆಗೆ ಸಂಚರಿಸುವುದಕ್ಕೆ ಅಂತರ ಕಡಿಮೆ ಎನ್ನುವ ಕಾರಣಕ್ಕಾಗಿ ಬೈಕು, ಕಾರುಗಳು ಹಾಗೂ ಕ್ರೂಸರ್‌ ವಾಹನಗಳೆಲ್ಲ ಈ ಮಾರ್ಗದಲ್ಲಿ ಹಗಲಿರುಳು ಓಡಾಡುತ್ತವೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ವಾಹನ ದಟ್ಟಣೆ ಅಥವಾ ರಸ್ತೆ ತಡೆ ನಿರ್ಮಾಣವಾದಾಗ ಇದೇ ಮಾರ್ಗದಲ್ಲಿ ಎಲ್ಲ ವಾಹನಗಳು ಸಂಚರಿಸುತ್ತವೆ. ವಾಹನ ಮತ್ತು ಜನಸಂಚಾರ ದೃಷ್ಟಿಯಲ್ಲಿ ಇದು ಪ್ರಮುಖ ರಸ್ತೆ. ಆದರೆ ರಸ್ತೆಯ ವಾಸ್ತವ ಸ್ಥಿತಿ ಮಾತ್ರ ಬೇರೆ ರೀತಿಯಲ್ಲಿದೆ.

ಮಳೆಗಾಲದಲ್ಲಿ ನೀರಿನ ಹೊಂಡ ವಾಗಿ ಮಾರ್ಪಡುವ ಈ ರಸ್ತೆ ಇನ್ನುಳಿದ ತಿಂಗಳಲ್ಲಿ ತಗ್ಗುದಿನ್ನೆಗಳ ಗುಡ್ಡದ ರಸ್ತೆ ಯಾಗುತ್ತದೆ. ಎಲ್ಲಿ ನೋಡಿದರೂ ರಸ್ತೆ ಯನ್ನು ಅಗೆಯಲಾಗಿರುತ್ತದೆ. ತಗ್ಗುಗಳ ಆಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗು ತ್ತಿದೆ. ತಗ್ಗುಗಳ ಆಳ ಕಡಿಮೆ ಮಾಡಲು ಪಾಲಿಕೆಯು ಆಗಾಗ ಮುರುಮ್‌ ಅಥವಾ ಸಣ್ಣ ಗಾತ್ರದ ಕಲ್ಲುಗಳನ್ನು ತಂದು ಹಾಕುತ್ತದೆ. ವಾಹನಗಳ ಓಡಾಟದ ರಭಸಕ್ಕೆ ಅವೆಲ್ಲವೂ ಕೊಚ್ಚಿಹೋಗಿ, ಮತ್ತೆ ಮೂರು ತಿಂಗಳಲ್ಲಿ ರಸ್ತೆಯು ಯಥಾಸ್ಥಿತಿಗೆ ಬರುತ್ತದೆ.

ಈ ರಸ್ತೆ ಮಾರ್ಗದಲ್ಲಿ ಮೆಹತಾ ಕಾನ್ವೆಂಟ್‌ ಇದೆ. ಹೀಗಾಗಿ ಬೆಳಿಗ್ಗೆಯಿಂದ ಸಂಜೆ ವರೆಗೂ ಶಾಲಾ ಮಕ್ಕಳ ಓಡಾಟ ಸಾಮಾನ್ಯ. ಶಾಲಾ ಮಕ್ಕಳನ್ನು ಬಿಡಲು, ಕರೆದುಕೊಂಡು ಹೋಗುವುದಕ್ಕೆ ಬರುವ ಟ್ಯಾಕ್ಸಿಗಳು, ಆಟೊಗಳು, ಕಾರು ಗಳು ಮತ್ತು ಬೈಕ್‌ಗಳು ರಸ್ತೆ ತುಂಬೆಲ್ಲ ಆವರಿಸಿಕೊಂಡು ನಿಲ್ಲುವುದರಿಂದ ಶಾಲಾ ಅವಧಿಯಲ್ಲಿ ರಸ್ತೆ ಸಂಚಾರದ ಸಮಸ್ಯೆಯು ಪ್ರತಿನಿತ್ಯ ಇಮ್ಮಡಿಸುತ್ತದೆ.

ಇದೇ ಮಾರ್ಗದಲ್ಲಿ ವಕೀಲರ ಕಚೇರಿಗಳು ಸಾಕಷ್ಟಿವೆ. ಅಲ್ಲದೆ, ಜಿಲ್ಲಾ ನ್ಯಾಯಾಲಯಕ್ಕೆ ಪ್ರತಿನಿತ್ಯ ವಕೀಲರು ಸಮಸ್ಯೆಯ ಮಧ್ಯೆಯೆ ಸಂಚರಿಸು ತ್ತಿದ್ದಾರೆ. ‘ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅನೇಕ ಬಾರಿ ಖುದ್ದಾಗಿ ಹೇಳಿದ್ದೇವೆ. ಲಿಖಿತ ರೂಪದಲ್ಲಿ ಮನವಿ ಕೊಟ್ಟಿದ್ದೇವೆ.
ರಸ್ತೆ ಮಾಡುತ್ತೇವೆ ಎನ್ನುತ್ತಲೇ ಇದ್ದಾರೆ’ ಎಂದು ವಕೀಲ ಮಹೇಶ್‌ ಬೇಸರ ವ್ಯಕ್ತಪಡಿಸಿದರು.

ಜೆಸ್ಕಾಂ ಮತ್ತು ವಿಧಾನಸೌಧದಲ್ಲಿ ವಿವಿಧ ಸರ್ಕಾರಿ ಕಚೇರಿಗಳ ನೌಕರರು ಹಾಗೂ ವಿವಿಧ ಕೆಲಸಗಳಿಗಾಗಿ ಬರುವ ಜನರು ಈ ರಸ್ತೆಯ ಅಧೋಗತಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.