ADVERTISEMENT

ಬಿಜೆಪಿಗೆ ಬಂಡಾಯದ ಬಿಸಿ; ಶಂಕರ್ ನಾಮಪತ್ರ ಸಲ್ಲಿಕೆ

ಬಿಎಸ್ಪಿ, ಎಐಎಂಇಪಿ, ಎಪಿಪಿ ಅಭ್ಯರ್ಥಿ ನಾಮಪತ್ರ; ಮತ್ತೆ ವಾಲ್ಮೀಕ ನಾಯಕ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:23 IST
Last Updated 25 ಏಪ್ರಿಲ್ 2018, 9:23 IST

ಚಿತ್ತಾಪುರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ 6 ಜನರು ಒಟ್ಟು 10 ನಾಮಪತ್ರವನ್ನು ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಎ.ಮಂಜುನಾಥ ಅವರಿಗೆ ಸಲ್ಲಿಸಿದರು.

ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ದೇವರಾಜ ಕೆಂಗಯ್ಯ ಒಡೆಯರ್ -2, ಬಿಜೆಪಿ ಅಭ್ಯರ್ಥಿ ವಾಲ್ಮೀಕ ನಾಯಕ-2, ಪಕ್ಷೇತರ ಅಭ್ಯರ್ಥಿಯಾಗಿ ಶಂಕರ್ ಸುಬ್ಬಣ್ಣ ಚವಾಣ್-2, ಎಐಎಂಇಪಿ ಅಭ್ಯರ್ಥಿ ರಾಜು ಯಲ್ಲಪ್ಪ ಹದನೂರ-1, ಎಪಿಪಿ ಅಭ್ಯರ್ಥಿ ರುಕುಮ್ ಕಲೀಪಣ್ಣ-2, ಪಕ್ಷೇತರ ಅಭ್ಯರ್ಥಿ ಸಾಯಬಣ್ಣ ಭೀಮಣ್ಣ ದೊಡ್ಡಮನಿ-1 ಅವರು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯ ಆರಂಭ ದಿನದಿಂದ ಈವರೆಗೆ 8 ಅಭ್ಯರ್ಥಿಗಳು 17 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎ.ಮಂಜುನಾಥ ತಿಳಿಸಿದರು. ಸಹಾಯಕ ಚುನಾವಣಾ ಧಿಕಾರಿ ತಹಶೀಲ್ದಾರ್ ಶಿವಾನಂದ ಪಿ.ಸಾಗರ ಉಪಸ್ಥಿತರಿದ್ದರು.

ADVERTISEMENT

ಕಳೆದ ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕರ ಚವಾಣ್ ಹಾಗೂ ಬಹುಜನ ಸಮಾಜ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸಾಯಬಣ್ಣ ದೊಡ್ಡಮನಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷದಲ್ಲಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ವರಿಷ್ಠರಿಂದ ಅನ್ಯಾಯ: ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಪ್ರಬಲ ಆಕಾಂಕ್ಷಿ ಯಾಗಿದ್ದೆ. ಈ ಕುರಿತು ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದೆ. ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನನಗೆ ಸೌಜನ್ಯಕ್ಕಾದರೂ ಮಾತನಾಡಿಸದೆ ಪಕ್ಷದ ವರಿಷ್ಠರು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿರುವ ಶಂಕರ್ ಚವಾಣ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸಂಘಟನೆಯಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಣೆ ಮಾಡುವ ಮೂಲಕ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಟಿಕೆಟ್ ಹಂಚಿಕೆ ಮಾಡುವಾಗ ಪ್ರಾಮಾಣಿಕರಿಗೆ ಆದ್ಯತೆ ನೀಡದೆ ಕಡೆಗಣಿಸಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಜಿ.ಪಂ ಚುನಾವಣೆಯಲ್ಲಿ ದಿಗ್ಗಾಂವ್ ಮೀಸಲು ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದೆ. ಆಗ ಜನಾಭಿ ಪ್ರಾಯದ ವಿರುದ್ಧ ಮಾಜಿ ಶಾಸಕ ವಾಲ್ಮೀಕ ನಾಯಕ ತಮ್ಮ ಮಗನಿಗೆ ಟಿಕೆಟ್ ಪಡೆದು ನನಗೆ ತೀವ್ರ ಅನ್ಯಾಯ ಮಾಡಿದ್ದಾರೆ. ನಮ್ಮ ಅಣ್ಣ ಬಾಬುರಾವ್ ಚವಾಣ್ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಕಲಬುರ್ಗಿ ಗ್ರಾಮೀಣ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ನನಗೆ ಬೆಂಬಲ ವ್ಯಕ್ತ ಮಾಡದೆ ನಿರ್ಲಕ್ಷಿಸಿದ್ದಾರೆ’ ಎಂದು ದೂರಿದರು.

‘ಪಕ್ಷಕ್ಕಾಗಿ ದುಡಿಯುವವರಿಗೆ ಬಿಜೆಪಿಯಲ್ಲಿ ನ್ಯಾಯ ಕೊಡುತ್ತಿಲ್ಲ. ಕಾರ್ಯಕರ್ತರ ಅಪೇಕ್ಷೆಯಂತೆ ನಾಮಪತ್ರ ಸಲ್ಲಿಸಿದ್ದೇನೆ. ಈ ಕುರಿತು ನನಗೆ ಪ್ರಶ್ನಿಸಲು ಬಿಜೆಪಿ ಮುಖಂಡರಿಗೆ ನೈತಿಕತೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ ಅವರು ಮಾತನಾಡಿದಾಗ ಮಾತ್ರ ಸೂಕ್ತ ಉತ್ತರ ಕೊಡುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.