ADVERTISEMENT

ಬಿತ್ತನೆ ಪೂರ್ವ ಉಳುಮೆ, ಯೋಜನೆ ಮಾಹಿತಿ

ರೈತರಿಗೆ ಕೃಷಿ ಮಾರ್ಗದರ್ಶನ, ಬಿತ್ತನೆ ಬೀಜಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 6:49 IST
Last Updated 6 ಜೂನ್ 2018, 6:49 IST

ಚಿತ್ತಾಪುರ: ‘2018-19ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ, ಬಿತ್ತನೆ ಪೂರ್ವದಲ್ಲಿ ಹೊಲಗಳ ಉಳುಮೆ, ಬಿತ್ತನೆ ಮಾಡುವ ಪದ್ಧತಿ, ಕೃಷಿ ಇಲಾಖೆಯಿಂದ ನೀಡುತ್ತಿರುವ ಬಿತ್ತನೆ ಬೀಜಗಳ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಜಾಲೇಂದ್ರ ಗುಂಡಪ್ಪ ಹೇಳಿದರು.

ಸ್ಥಳೀಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಭಿಯಾನ ವಾಹನವು ತಾಲ್ಲೂಕಿನ ಎಲ್ಲ ವಲಯ ಮತ್ತು ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ’ ಎಂದು ಹೇಳಿದರು.

ADVERTISEMENT

ರೈತರು ಕೃಷಿ ಇಲಾಖೆಯ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬೇಕು. ನೀಡಿರುವ ಮಾಹಿತಿ ಪ್ರಕಾರ ಕೃಷಿ ಚಟುವಟಿಕೆ ಮಾಡಿ ಉತ್ತಮ ಇಳುವರಿ ಪಡೆಯಲು ಮುಂದಾಗಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆಯ ಮೂಲಕ ರೈತರಿಗೆ ನೀಡುತ್ತಿರುವ ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಲ್ಲೂಕು ಕೃಷಿ ಇಲಾಖೆಯ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ  ಹಸಿರು ನಿಶಾನೆ ತೋರಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಬಸಲಿಂಗಪ್ಪ ಡಿಗ್ಗಿ, ತೋಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್, ರೈತ ಮುಖಂಡರಾದ ಶಿವಶರಣ ರೆಡ್ಡಿ ಭಂಕಲಗಾ, ಸತೀಶ ಕಾಂತಾ, ಸತ್ಯನಾರಾಯಣ ಯಾಧವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.