ADVERTISEMENT

ಮುಧೋಳ ತಾಲ್ಲೂಕು ಕೇಂದ್ರಕ್ಕೆ ಒತ್ತಾಯ

ವಿವಿಧ ಸಂಘಟನೆಗಳ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:07 IST
Last Updated 27 ಮಾರ್ಚ್ 2018, 9:07 IST
ಸೇಡಂ ತಾಲ್ಲೂಕಿನ ಮುಧೋಳ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಮುಧೋಳ ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರೊಬೆಷನರಿ ತಹಶೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಮನವಿ ಸಲ್ಲಿಸಿದರು
ಸೇಡಂ ತಾಲ್ಲೂಕಿನ ಮುಧೋಳ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಮುಧೋಳ ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರೊಬೆಷನರಿ ತಹಶೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಮನವಿ ಸಲ್ಲಿಸಿದರು   

ಸೇಡಂ: ತಾಲ್ಲೂಕಿನ ಮುಧೋಳ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಮುಧೋಳ ತಾಲ್ಲೂಕು ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿ ಕಾರಿಗಳು ಸೋಮವಾರ ಪ್ರೊಬೆಷನರಿ ತಹಶೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಮನವಿ ಸಲ್ಲಿಸಿದರು.

ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ‘ಸೇಡಂ ತಾಲ್ಲೂಕಿ ನಲ್ಲಿಯೇ ಮುಧೋಳ ಗ್ರಾಮವು ಅತಿ ದೊಡ್ಡ ಗ್ರಾಮವಾಗಿದೆ. ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸುಮಾರು 58 ಹಳ್ಳಿಗಳು 68 ತಾಂಡಾಗಳು ಒಳಪಡುತ್ತವೆ. ಸೇಡಂ ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 3 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗ್ರಾಮಗಳು ಮುಧೋಳ ಗ್ರಾಮವನ್ನು ಅವಲಂಬಿಸಿದ್ದಾರೆ. ಸೇಡಂನಿಂದ ಸುಮಾರು 20 ಕಿ.ಮಿ ದೂರದಲ್ಲಿದೆ. ಇದರಿಂದ ಮುಧೋಳ ಸೇರಿದಂತೆ ಇನ್ನಿತರ ಕಡೆಗಳಿಂದ ಬರುವ ಜನರಿಗೆ ತೊಂದರೆಯಾಗುತ್ತಿದೆ. ನಾಡಕಚೇರಿಯನ್ನು ಮೇಲ್ದರ್ಜೇಗೇರಿಸಿ ವಿಶೇಷ ತಹಶೀಲ್ದಾರ್‌ ಅವರನ್ನು ನೇಮಿಸಬೇಕು. ಯಾನಾಗುಂದಿ ಉಕ್ಕಡ ಠಾಣೆಯನ್ನು ಪೊಲೀಸ್ ಠಾಣೆಯ ಕೇಂದ್ರಕ್ಕೆ ಮೇಲ್ದರ್ಗೇರಿಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನ ಕೋಲ್ಕುಂದಾ ಮತ್ತು ಮದನಾ ಗ್ರಾಮಗಳನ್ನು ಹೋಬಳಿ ಕೇಂದ್ರಗಳನ್ನಾಗಿ ಘೋಷಿಸಬೇಕು. ಮುಧೋಳ ವ್ಯಾಪ್ತಿಯಲ್ಲಿ ಜನಸಂಚಾರ ಹೆಚ್ಚಾಗಿರುವುದರಿಂದ ನಮ್ಮ ಹಿಂದುಳಿದ ಭಾಗಕ್ಕೆ ಬಸ್ ಘಟಕವನ್ನು ಮಂಜೂರು ಮಾಡಬೇಕು. ಮುಧೋಳ, ಆಡಕಿ, ಕೋಲಕುಂದಾ, ಈ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜನಸಂಖ್ಯೆ ಸುಮಾರು 1 ಲಕ್ಷಕ್ಕಿಂತ ಹೆಚ್ಚಿದೆ.

ADVERTISEMENT

ಮೂರು ಕ್ಷೇತ್ರಗಳನ್ನು ಒಗ್ಗೂಡಿಸಿ ತಾಲ್ಲೂಕು ಕೇಂದ್ರ ಮಾಡಬೇಕು. ಅಲ್ಲದೆ ತಾಲ್ಲೂಕಿನ ಎಲ್ಲಾ ಗ್ರಾಮಗಳ ಹೆಸರಿನ ಮುಂದೆ ತೆಲಗು ಭಾಷೆಯ ಪಲ್ಲಿ ಬದಲಾಗಿ ಕನ್ನಡ ಪದ ಹಳ್ಳಿ ಗಳನ್ನಾಗಿ ಬದಲಾಯಿಸಬೇಕು’ ಎಂದು ಆಗ್ರಹಿಸಿದರು.

ಮುಧೋಳ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಫಿರಂಗಿ, ವಿಶೇಷ ತಹಶೀಲ್ದಾರ್ ರಾಜಶೇಖರ ಹಾವಣಿ, ಗೌರವ ಅಧ್ಯಕ್ಷ ಮಧುಸೂದನರೆಡ್ಡಿ ಮಾಲಿಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಶ್ರೀನಿವಾಸರೆಡ್ಡಿ ಮದನಾ, ನಾಗರೆಡ್ಡಿ ಪೊ. ಪಾಟೀಲ, ಲಕ್ಷ್ಮಿಕಾಂತ ಹೊನಕೇರಿ, ದತ್ತಾತ್ರೇಯ ಆಡಕಿ, ಶಿವಶಂಕ್ರಯ್ಯಸ್ವಾಮಿ ಮಠಪತಿ, ವಿಜಯಕುಮಾರ ಖೇವಜಿ, ಶ್ರೀನಿವಾಸಗೌಡ, ಫಂಡರಿ ಬಸೂದೇ, ಶಂಕರ ಕಡಚರ್ಲಾ ಇದ್ದರು.

**

ಮುಧೋಳ ಹೋಬಳಿಗೆ ಅನೇಕ ಗ್ರಾಮಗಳು ಒಳಪಡುತ್ತವೆ. ಇಲ್ಲಿ ಸರ್ಕಾರಿ ಕಚೇರಿಗಳಿದ್ದು, ವಿಶೇಷ ತಹಶೀಲ್ದಾರ್ ಅವರನ್ನು ನೇಮಿಸಬೇಕು.

–ಅಶೋಕ ಫಿರಂಗಿ, ಅಧ್ಯಕ್ಷ, ಮುಧೋಳ ತಾಲ್ಲೂಕು ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.