ADVERTISEMENT

ವೈವಿಧ್ಯಮಯ ವಿಷಯ: ಭರಪೂರ ಮಾಹಿತಿ

ನಗರಕ್ಕೆ ಬಂದ ವಿಶೇಷ ರೈಲು: ನಿಗೂಢ ಪ್ರಶ್ನೆಗಳಿಗೆ ‘ಸೈನ್ಸ್ ಎಕ್ಸ್‌ಪ್ರೆಸ್’ನಲ್ಲಿ ನಿಶ್ಚಿತ ಉತ್ತರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 11:20 IST
Last Updated 1 ಜೂನ್ 2017, 11:20 IST
ವೈವಿಧ್ಯಮಯ ವಿಷಯ: ಭರಪೂರ ಮಾಹಿತಿ
ವೈವಿಧ್ಯಮಯ ವಿಷಯ: ಭರಪೂರ ಮಾಹಿತಿ   

ಕಲಬುರ್ಗಿ: ಕೋಟ್ಯಂತರ ವರ್ಷಗಳ ಹಿಂದೆ ಭೂಮಿ ಮೇಲೆ ಓಡಾಡಿ­ಕೊಂಡಿದ್ದ ಡೈನೊಸರ್‌ಗಳು ಅಳಿದವೇಕೆ? ತಾಪಮಾನ ಏರಿಕೆಯಿಂದ ಆಗುವ ದುಷ್ಪರಿಣಾಮವೇನು? ಹಸಿರು ಪರಿಸರ ನಾಶದಿಂದ ಪ್ರಾಣಿಪಕ್ಷಿಗಳಿಗೆ ಏನಾಗಬಹುದು? ಮಂಜುಗಡ್ಡೆ ಕರಗುವಿಕೆಯಿಂದ ಎದುರಾಗುವ ಸವಾಲುಗಳೇನು? ಪರಿಸರ ಸಂರಕ್ಷಣೆಗೆ ತುರ್ತಾಗಿ ಆಗಬೇಕಾದ್ದು ಏನು?

ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕಾಡುತ್ತಿದ್ದು, ಉತ್ತರಗಳು ಸಿಗದಿದ್ದರೆ ಇಲ್ಲಿದೆ ಪರಿಹಾರ. ನಗರದ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿರುವ ‘ಸೈನ್ಸ್ ಎಕ್ಸ್‌ಪ್ರೆಸ್ ಕ್ಲೈಮೇಟ್‌ ಆ್ಯಕ್ಷನ್‌ ಸ್ಪೆಷಲ್‌’ ರೈಲಿನೊಳಗೆ ಒಮ್ಮೆ ಪ್ರವೇಶಿಸಿ ಒಂದು ಗಂಟೆ ಕಳೆದರೆ ಸಾಕು, ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಅಂಕಿ ಅಂಶ ಸಹಿತ ನಿಖರ ಮಾಹಿತಿ ಸುಲಭವಾಗಿ ಸಿಗುತ್ತದೆ.

ದೇಶದ ಆರ್ಥಿಕ, ಸಾಮಾಜಿಕ ಮತ್ತು ಭೌಗೋಳಿಕ ಮಾಹಿತಿ ಸೇರಿದಂತೆ ಇಡೀ ಭೂಮಂಡಳದ  ಪರಿಚಯವನ್ನು ‘ಸೈನ್ಸ್‌ ಎಕ್ಸ್‌ಪ್ರೆಸ್‌’ ಮಾಡಿಕೊಡುತ್ತದೆ. ದೇಶ ಎಷ್ಟು ವೈವಿಧ್ಯಮಯವಾಗಿದೆ ಮತ್ತು ಎಷ್ಟೆಲ್ಲ ನಿಗೂಢ ಸಂಗತಿಗಳಿಂದ ಕೂಡಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡುವ ರೈಲಿನಲ್ಲಿ ಮಾರ್ಗದರ್ಶಕ ಸಿಬ್ಬಂದಿ ನೆರವಿನಿಂದ ಸಣ್ಣಪುಟ್ಟ ಪ್ರಯೋಗವೂ ಮಾಡಬಹುದು.

ದೇಶದ ನೈಜ ಚಿತ್ರಣ ಸಾದರಪಡಿ ಸುವ ಅಪರೂಪದ ಚಿತ್ರಗಳು ಬೆರಗು ಮೂಡಿಸಿದರೆ, ಗೊಂಬೆಗಳು ಮತ್ತು ಆಕರ್ಷಕ ವಸ್ತುಗಳ ಮೂಲಕ ಸಿಗುವ ಮಾಹಿತಿ ಜ್ಞಾನ ವೃದ್ಧಿಸುತ್ತವೆ. ಮಾರ್ಗ ದರ್ಶನ ಸಿಬ್ಬಂದಿ ಹಿಂದಿ, ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಹವಾಮಾನ ಬದಲಾವಣೆ ಕುರಿತು ಒಂದು ಬೋಗಿಯಲ್ಲಿ ಮಾಹಿತಿ ಸಿಕ್ಕರೆ, ಮತ್ತೊಂದರಲ್ಲಿ ಗ್ರಾಮೀಣ ಮತ್ತು ನಗರ ಜೀವನಶೈಲಿ ನಡುವಿನ ವ್ಯತ್ಯಾಸ ಅರಿವಿಗೆ ಬರುತ್ತದೆ. ವನ್ಯಪ್ರಾಣಿ, ಜೈವಿಕ ತಂತ್ರಜ್ಞಾನ, ಕೃಷಿ, ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನ ಮುಂತಾದವು ಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ADVERTISEMENT

ಒಟ್ಟು 16 ಬೋಗಿಗಳ ರೈಲಿನಲ್ಲಿ 13 ಬೋಗಿಗಳನ್ನು ವಿಜ್ಞಾನ ವಸ್ತು ಪ್ರದರ್ಶನಕ್ಕೆಂದೇ ಮೀಸಲಿಡಲಾಗಿದೆ. ವಿಜ್ಞಾನ ಪ್ರದರ್ಶನಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಲಾದ ಶ್ವೇತಬಣ್ಣದ ರೈಲಿನ ಪ್ರತಿಯೊಂದು ಕಿಟಕಿಯ ಗಾಜು ಬಣ್ಣಬ ಣ್ಣದ ಚಿತ್ರಗಳನ್ನು ಹೊಂದಿದೆ. ಸೋಲಾರ ಉಪಕರಣಗಳನ್ನು ಹೊಂದಿರುವ ಈ ರೈಲು ಸೌರಶಕ್ತಿ ಸದ್ಬಳಕೆ ಮಾಡುತ್ತದೆ.

ಪ್ರದರ್ಶನದುದ್ದಕ್ಕೂ ಸ್ಥಿರಚಿತ್ರಗಳು, ವಿಡಿಯೊಗಳು ಮತ್ತು ಸಂವಹನಾತ್ಮಕ ವಸ್ತುಗಳು ಆಕರ್ಷಿಸುವುದರ ಜೊತೆಗೆ ಉಪಯುಕ್ತ ಮಾಹಿತಿ ನೀಡುತ್ತವೆ. ಹುಲಿ, ಹಿಮಕರಡಿ, ಆಮೆ ಮುಂತಾದ ವುಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾ ಗಿದ್ದು ಅವುಗಳ ಮೂಲ, ಜೀವನಶೈಲಿ ಮತ್ತು ಸದ್ಯದ ಸ್ಥಿತಿಗತಿ ಕುರಿತು ಮಾಹಿತಿ ನೀಡಲಾಗಿದೆ. ಹವಾಮಾನ ವೈಪರೀತ್ಯ ದಿಂದ ಯಾವುದೆಲ್ಲ ಸ್ವರೂಪದಲ್ಲಿ ಅವುಗಳ ಮೇಲೆ ದುಷ್ಪರಿಣಾಮ ಆಗು ತ್ತಿದೆ ಎಂಬುದನ್ನು ಅರಿಯಬಹುದು.

‘ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತನ್ನಿ’: ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕಾದದ್ದು ಅವಶ್ಯ. ಕಿರಿಯರಿಗೆ ಅಲ್ಲದೇ ಹಿರಿಯರಿಗೆ ಸೈನ್ಸ್‌ ಎಕ್ಸ್‌ಪ್ರೆಸ್‌ ರೈಲು ಸಮಗ್ರ ಮಾಹಿತಿ ನೀಡುತ್ತದೆ’ ಎಂದು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್‌ ತಿಳಿಸಿದರು.

ಬುಧವಾರ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಪರಿಸರವನ್ನು ಹೇಗೆ ಸಂರಕ್ಷಿಸಿಕೊಳ್ಳ ಬೇಕು ಮತ್ತು ಯಾವುದೆಲ್ಲ ಮುಂಜಾ ಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಪ್ರದರ್ಶನದಲ್ಲಿ ಉತ್ತಮ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಲಾಗಿದೆ. ಅವುಗಳನ್ನು ನಾವು ಪಾಲಿಸಬೇಕಾದ ಅಗತ್ಯವಿದೆ’ ಎಂದರು.

‘ಶಾಲಾ ಕಾಲೇಜಿನ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ಕರೆ ತಂದು ವಿಜ್ಞಾನದ ಕುರಿತು ಜಾಗೃತಿ ಮೂಡಿಸಬೇಕು. ಕೆಲವಾರು ವಿಷಯಗಳ ಬಗ್ಗೆ ಅವರಿಗೆ ಇರುವ ಗೊಂದಲ ಮತ್ತು ಸಂಶಯ ಗಳನ್ನು ನಿವಾರಿಸಬೇಕು’ ಎಂದರು.

ಜಿ.ಪಂ ಸಿಇಒ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ‘ನಗರ ಮತ್ತು ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳು ತಪ್ಪದೇ ವಿಶೇಷ ರೈಲಿನ ಪ್ರಯೋಜನ ಪಡೆಯ ಬೇಕು. ಇಲ್ಲಿ ಇರುವ ಮಾಹಿತಿ ದಾಖಲಿಸಿ ಕೊಂಡಲ್ಲಿ, ಪ್ರಸ್ತುತ ಅಲ್ಲದೇ ಭವಿಷ್ಯ ದಲ್ಲೂ ತುಂಬಾ ಉಪಯುಕ್ತ’ ಎಂದರು.

****
ಫೆಬ್ರುವರಿಯಲ್ಲಿ ಸಂಚಾರ ಆರಂಭ
ನವದೆಹಲಿಯ ಸಫ್ದರ್‌ಜಂಗ್‌ ರೈಲ್ವೆ ನಿಲ್ದಾಣದಿಂದ 2017ರ ಫೆಬ್ರುವರಿ 17ರಂದು ಒಂಬತ್ತನೇ ಸುತ್ತಿನ ಸಂಚಾರ ಆರಂಭಿಸಿರುವ ‘ಸೈನ್ಸ್‌ ಎಕ್ಸ್‌ಪ್ರೆಸ್‌’ ಗುಲಬರ್ಗಾ ರೈಲು ನಿಲ್ದಾಣಕ್ಕೆ ಬರುವ ಮುನ್ನ 37 ನಿಲ್ದಾಣಗಳಲ್ಲಿ ನಿಲುಗಡೆಯಾ­ಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿ ಜೂನ್‌ 6 ರಿಂದ 8 ಮತ್ತು ಕೆಂಗೇರಿಯಲ್ಲಿ 9 ರಿಂದ 11ರ ವರೆಗೆ ಇರಲಿದೆ. ಗುಜರಾತ್‌ನ ಗಾಂಧಿನಗರ ದಲ್ಲಿ ಸೆಪ್ಟೆಂಬರ್‌ 5 ರಿಂದ 8ರವರೆಗೆ ನಿಲುಗಡೆಯಾ ಗಲಿದ್ದು, ಅಲ್ಲಿಗೆ ಸುತ್ತು ಕೊನೆಗೊಳ್ಳಲಿದೆ.

****
ಸೈನ್ಸ್‌ ಎಕ್ಸ್‌ಪ್ರೆಸ್‌ ವಿಶೇಷ
* ದೇಶದಲ್ಲೇ ಅತ್ಯಂತ ವಿಶಾಲ, ದೀರ್ಘ ಸಂಚಾರಿ ವಿಜ್ಞಾನ ವಸ್ತುಪ್ರದರ್ಶನ
* ಅಕ್ಟೋಬರ್‌ 2007ರಲ್ಲಿ ಚಾಲನೆ,  ದೇಶದೆಲ್ಲೆಡೆ 8 ಸುತ್ತು ಪೂರೈಕೆ
* 1.42 ಲಕ್ಷ ಕಿ.ಮೀ. ಸಂಚಾರ, 455 ನಿಲ್ದಾಣಗಳಲ್ಲಿ ಪ್ರದರ್ಶನ
* ಒಟ್ಟು ಪ್ರದರ್ಶನ ದಿನಗಳು: 1602. ವೀಕ್ಷಕರ ಭೇಟಿ: 1.56 ಕೋಟಿ
* 300 ಸ್ಥಿರ ಚಿತ್ರಗಳು, 150 ವಿಡಿಯೊ, 30 ಸಂವಹನಾತ್ಮಕ ವಸ್ತುಗಳು
* ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಪ್ರದರ್ಶನ ವೀಕ್ಷಣೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.