ADVERTISEMENT

ಶೇ 75ರಷ್ಟು ಮತದಾನದ ಗುರಿ: ಸಿಇಒ ಹೆಪ್ಸಿಬಾ ರಾಣಿ

‘ಮತದಾನ ಜಾಗೃತಿ’ಗೆ ಅಧಿಕಾರಿಗಳ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 11:12 IST
Last Updated 28 ಏಪ್ರಿಲ್ 2018, 11:12 IST

ಚಿತ್ತಾಪುರ: ‘ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ, ಅರಿವು ಮೂಡಿಸಿ ಶೇ 75ರಷ್ಟು ಮತದಾನ ಆಗುವಂತೆ ಮಾಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ಚುನಾವಣೆ ಮತದಾನ ಜಾಗೃತಿಗೆ ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಬೈಕ್ ರಾಲಿ ನಡೆಸಿ, ಬಸ್ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮತದಾನ ಪವಿತ್ರ ಹಕ್ಕು. ಮತದಾರರು ಮತದಾನ ಹಕ್ಕು ಚಲಾವಣೆ ಮಾಡಿ ಪ್ರಜಾಪ್ರಭುತ್ವದ ಮೌಲ್ಯ ಉಳಿಸಬೇಕು’ ಎಂದರು.

ADVERTISEMENT

‘ಶೇಕಡಾವಾರು ಮತದಾನ ಹೆಚ್ಚಿಸ ಬೇಕೆಂದು ಜಿಲ್ಲೆಯಾದ್ಯಂತ ಮತ ದಾರರ ಜಾಗೃತಿಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಹಿಂದಿನ ಚುನಾವಣೆಗಿಂತ ಈ ಬಾರಿ ಶೇಕಡಾ ವಾರು ಪ್ರಮಾಣ ಹೆಚ್ಚಾಗು ವಂತೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು’ ಎಂದು ಸಲಹೆ ಮಾಡಿದರು.

‘ಮತದಾರರು ಚುನಾವಣೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬೇಕು. ಕಡ್ಡಾ ಯವಾಗಿ ಮತದಾನ ಮಾಡಬೇಕು. ಮತದಾನವೇ ಪ್ರಜಾಪ್ರಭುತ್ವದ ಜೀವಾಳ ವಾಗಿದೆ. ಮತದಾನ ಮಾಡುವ ಮೂಲಕ ಜನರು ನೇರವಾಗಿ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜನ ರಿಗೆ ಸಂವಿಧಾನ ನೀಡಿರುವ ವಿವಿಧ ಹಕ್ಕು ಗಳಂತೆ ಮತದಾನವು ಪ್ರಬಲ ಹಕ್ಕು’ ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರು ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಸೇಡಂ ಉಪ ವಿಭಾಗಾ ಧಿಕಾರಿ ಡಾ.ಸುಶೀಲಾಬಾಯಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯೂಸುಫ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ಶೃಂಗೇರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ಮೇಕಿನ್, ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ಗೋಳಾ, ಸಿಡಿಪಿಒ ಶಿವಶರಣಪ್ಪ ಉಪಸ್ಥಿತರಿದ್ದರು.

ಬೈಕ್ ರ್‍ಯಾಲಿ: ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿಯಿಂದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿಗೆ ಹೆಪ್ಸಿಬಾ ರಾಣಿ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿ ಮಾಡಲಾಯಿತು. ತಾಲ್ಲೂಕುಮಟ್ಟದ ವಿವಿಧ ಇಲಾಖೆ ಗಳ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆ ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಬಸವಳಿದ ಸಿಬ್ಬಂದಿ: ಮತದಾನ ಜಾಗೃತಿ ಬೈಕ್ ರ್‍ಯಾಲಿ ಕಾರ್ಯಕ್ರಮಕ್ಕೆ ಹೆಪ್ಸಿಬಾ ರಾಣಿ ಅವರ ಆಗಮನದ ನಿರೀಕ್ಷೆ ಮಾಡುತ್ತಾ ಬಿಸಿಲಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಸುಸ್ತಾದರು.

ಇಲ್ಲಿನ ಲಾಡ್ಜಿಂಗ್ ಕ್ರಾಸ್ ಬಳಿ ಅಧಿಕಾರಿ ಮತ್ತು ಸಿಬ್ಬಂದಿ ಬೈಕ್, ಬ್ಯಾನರ್ ಹಿಡಿದುಕೊಂಡು ಬೆಳಿಗ್ಗೆ 9.30ಕ್ಕೆ ಜಮಾವಣೆಗೊಂಡು ಸಿಇಒ ಅವರು ಬರುವಿಕೆಗಾಗಿ ಕಾದು ನಿಂತಿದ್ದರು.

ಸುಡುವ ಬಿಸಿಲಿನಲ್ಲಿ ನಡುರಸ್ತೆಯಲ್ಲಿ ನಿಂತ ಅಧಿಕಾರಿ, ಸಿಬ್ಬಂದಿ ಬಿಸಿಲಿಗೆ ಬೆವರಿದರು. ಮಹಿಳಾ ಸಿಬ್ಬಂದಿ ರಸ್ತೆ ಅಕ್ಕಪಕ್ಕದ ಅಂಗಡಿಗಳ ಮುಂದಿನ ನೆರಳಿನ ಆಸರೆ ಪಡೆದರು. ಪುರುಷ ಸಿಬ್ಬಂದಿ ಬೈಕ್ ತೆಗೆದುಕೊಂಡು ನೆರಳು ಹುಡುಕುತ್ತ ಅಲೆದಾಡಿದರು. ಕೊನೆಗೆ ಸಿಇಒ 10.40ಕ್ಕೆ ಆಗಮಿಸಿದರು.

ನಂತರ ಬೈಕ್ ರ್‍ಯಾಲಿ ಶುರುವಾಯಿತು. ರ್‍ಯಾಲಿ ಮುಂದೆ ಸಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು ಸ್ವಲ್ಪ ದೂರ ಹೆಜ್ಜೆ ಹಾಕಿ ರ್‍ಯಾಲಿಯಿಂದ ಹಿಂದಕ್ಕೆ ಸರಿದು ಬಸ್ ನಿಲ್ದಾಣದ ಹೋಟೆಲ್ ಮುಂದೆ ನೆರಳಿನಲ್ಲಿ ಜಮಾವಣೆಗೊಂಡು ನಿಂತರು. ಅಧಿಕಾರಿ ಕೇಳಿದರೆ ‘ಏನು ಮಾಡೋದು ಸರ್ ಬಿಸಿಲಿನ ತಾಪ ಹೆಚ್ಚಾಗಿದೆ’ ಎಂದು ಸಮಜಾಯಿಷಿ ನೀಡಿದರು.

**
ಚುನಾವಣೆಯಲ್ಲಿ ಶೇ 75ಕ್ಕಿಂತ ಅಧಿಕ ಮತದಾನ ಮಾಡಿಸುವ ಜಿಲ್ಲಾಡಳಿತ ಸವಾಲನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿ ಸಾಕಾರಗೊಳಿಸಬೇಕು
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಸಿಇಒ, ಜಿ.ಪಂ ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.