ADVERTISEMENT

ಹಳ್ಳಿಗಾಡಿನ ‘ಕುಸುಮ’ಗಳ ಇಮ್ಮಡಿಸಿದ ಸಂಭ್ರಮ

ಶಾಲಾ ಪ್ರಾರಂಭೋತ್ಸವ; ನಗರದಲ್ಲಿ ನೀರಸ, ಹಲವೆಡೆ ಬಿಕೋ ಎಂದ ಕೊಠಡಿಗಳು

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:17 IST
Last Updated 30 ಮೇ 2018, 9:17 IST
ಕಲಬುರ್ಗಿಯ ಆಸಿಫ್‌ಗಂಜ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳೊಂದಿಗೆ ಶಿಕ್ಷಕಿಯರು ಸೆಲ್ಫಿ ತೆಗೆಸಿಕೊಂಡರು
ಕಲಬುರ್ಗಿಯ ಆಸಿಫ್‌ಗಂಜ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳೊಂದಿಗೆ ಶಿಕ್ಷಕಿಯರು ಸೆಲ್ಫಿ ತೆಗೆಸಿಕೊಂಡರು   

ಕಲಬುರ್ಗಿ: ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಿ ಮಂಗಳವಾರ ಸಂಭ್ರಮವೋ ಸಂಭ್ರಮ. ಹಳ್ಳಿಗಾಡಿನ ಕುಸುಮಗಳು ಶಾಲೆಯಲ್ಲಿ ಮೊದಲ ದಿನವನ್ನು ಖುಷಿಯಿಂದ ಕಳೆದವು. ಆದರೆ, ನಗರದ ಶಾಲೆಗಳಲ್ಲಿ ತಕ್ಕ ಪ್ರತಿಕ್ರಿಯೆ ಸಿಗಲಿಲ್ಲ. ಮಕ್ಕಳು ಗೈರಾಗಿದ್ದರಿಂದ ಕೊಠಡಿಗಳು ಬಿಕೋ ಎನ್ನುತ್ತಿದ್ದವು.

ಇಲ್ಲಿನ ಸೂಪರ್‌ ಮಾರ್ಕೆಟ್ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ (ಎಂಪಿಎಚ್‌ಎಸ್‌) ಮುಖ್ಯಶಿಕ್ಷಕ ಎ.ಬಿ.ದಾನಪ್ಪ ಸೇರಿದಂತೆ ಎಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ ಕೂಡ ಬೆಳಿಗ್ಗೆ 8ರ ಹೊತ್ತಿಗೆ ಹಾಜರಿದ್ದರು. ಆದರೆ, ಈ ಶಾಲೆಯಲ್ಲಿ ಬಹುಪಾಲು ಗ್ರಾಮೀಣ ಪ್ರದೇಶದ ಮಕ್ಕಳೇ ಪ್ರವೇಶ ಪಡೆದಿದ್ದಾರೆ. ಬೆಳಿಗ್ಗೆ 10 ಗಂಟೆಯ
ವರೆಗೂ ಯಾವೊಬ್ಬ ವಿದ್ಯಾರ್ಥಿಯೂ ಬರಲಿಲ್ಲ.

‘ಪ್ರತಿ ವಿದ್ಯಾರ್ಥಿಯ ಪಾಲಕರಿಗೂ ಫೋನ್‌ ಮಾಡಿ ತಿಳಿಸಿದ್ದೇವೆ. ಸಮವಸ್ತ್ರದ ಬಟ್ಟೆ, ಪುಸ್ತಕಗಳನ್ನೂ ಹಂಚಲು ಸಿದ್ಧ ಮಾಡಿಕೊಂಡಿದ್ದೇವೆ. ಬಿಸಿಯೂಟಕ್ಕೂ ಎಲ್ಲ ಸಿದ್ಧವಾಗಿದ್ದೇವೆ’ ಎಂದು ಮುಖ್ಯಶಿಕ್ಷಕ ಎ.ಬಿ.ದಾನಪ್ಪ ಹೇಳಿದರು.

ADVERTISEMENT

ಇದರ ಪಕ್ಕದಲ್ಲೇ ಇರುವ ಗಾಜಿಪುರ ಚೇತನ ಯೂತ್‌ ಫೋರಂನ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ದಿನವೇ ನೂರಕ್ಕೂ ಹೆಚ್ಚು ಮಕ್ಕಳು ಹಾಜರಾಗಿದ್ದರು. ಮುಖ್ಯಶಿಕ್ಷಕಿ ವನಮಾಲಾ ಮಠಪತಿ ಹಾಗೂ ಸಿಬ್ಬಂದಿ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಕೃಷ್ಣ, ರಾಧೆಯಾಗಿ ಬಂದ ಚಿಣ್ಣರು:

ಆಸಿಫ್‌ಗಂಜ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಮಕ್ಕಳ ಹಾಜರಾತಿ ಕಾಣಿಸಲಿಲ್ಲ. ಆದರೆ, ಮೊದಲಬಾರಿಗೆ ಶಾಲೆ ಮಟ್ಟಿಲು ಹತ್ತುವ ಉತ್ಸಾಹದಲ್ಲಿದ್ದ ಹತ್ತಾರು ಚಿಣ್ಣರು ಬೆಳಿಗ್ಗೆಯೇ ತರಗತಿಗೆ ಲಗ್ಗೆ ಇಟ್ಟರು.

ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳು ಕೃಷ್ಣ, ರಾಧೆ, ಗಾಂಧೀಜಿ, ಅಂಬೇಡ್ಕರ್ ವೇಷದಲ್ಲಿ ಬಂದು ಗಮನ ಸೆಳೆದರು. ಮುಖ್ಯಶಿಕ್ಷಕಿ ನೀಲಮ್ಮ ಡೆಂಗಳಿ ಹಾಗೂ ಸಿಬ್ಬಂದಿ ಮಕ್ಕಳೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ಮಕ್ಕಳು–ಪಾಲಕರ ಸಂಭ್ರಮ: ಜಿಲ್ಲೆಯ ಬಹುಪಾಲು ಹಳ್ಳಿಗಳಲ್ಲಿ ಶಾಲಾ ಪ್ರಾರಂಭೋತ್ಸವ ಭರ್ಜರಿಯಾಗಿತ್ತು. ಸೋಮವಾರ ರಾತ್ರಿಯಿಂದಲೇ ಶಿಕ್ಷಕರೊಂದಿಗೆ ಕೈ ಜೋಡಿಸಿದ ಪಾಲಕರು ಶಾಲೆಗಳನ್ನು ಸ್ವಚ್ಛ ಮಾಡಿ ತಳಿರು– ತೋರಣ ಕಟ್ಟಿದರು. ವನಿತೆಯರು ಬೆಳಿಗ್ಗೆ ಶಾಲಾ ಆವರಣದ ತುಂಬ ರಂಗವಲ್ಲಿ ಹಾಕಿದರು. ಎತ್ತಿನ ಬಂಡಿ, ಬೈಕ್‌, ಆಟೊ, ಟ್ರ್ಯಾಕ್ಟರುಗಳಲ್ಲಿ ಮಕ್ಕಳು ಹತ್ತಿಸಿಕೊಂಡಿ ಮೆರವಣಿಗೆ ಮಾಡಿದರು. ಇನ್ನು ಕೆಲವೆಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರೇ ಮಕ್ಕಳೊಂದಿಗೆ ಪ್ರಭಾತಪೇರಿ ನಡೆಸಿದರು.

ತೊಟ್ಟಿಲಲ್ಲಿ ನಲಿದ ಚಿಣ್ಣರು:

ಚಿತ್ತಾಪುರ ತಾಲ್ಲೂಕು ಶಹಾಬಾದ್‌ನ ಶಂಕರ ಅಂಗನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ‘ತೊಟ್ಟಿಲು’ ಕಾರ್ಯಕ್ರಮ ಗಮನ ಸೆಳೆಯಿತು. ಅಂಗನವಾಡಿಯಿಂದ ಮಕ್ಕಳು ಪ್ರಾಥಮಿಕ ಶಾಲೆಗೆ ಸೇರಿಸುವ ಮುನ್ನ ತೊಟ್ಟಿಲಲ್ಲಿ ತೂಗಿ, ಹೂಮಾಲೆ ಹಾಕಿ ಖುಷಿಪಡಿಸಿದ್ದು ವಿಶೇಷ. ಪ್ರತಿಯೊಬ್ಬ ಶಿಕ್ಷಕರೂ ಮಕ್ಕಳಿಗೆ ಕೈತುತ್ತು ತಿನ್ನಿಸಿ ಖುಷಿಪಡಿಸಿದರು.

ಅರೆಜಂಬಗಿ ಶಾಲೆಯಲ್ಲಿ ಬಿಇಒ ಶಂಕರಮ್ಮ ಡವಳಗಿ ಅವರೇ ಆಂದೋಲನದಲ್ಲಿ ಭಾಗವಹಿಸಿ ಶಿಕ್ಷಕರಿಗೆ ಹುರುಪು ತುಂಬಿದರು. ತಳಿರು– ತೋರಣ, ಬಾಳೆಕಂದು, ತೆಂಗಿನ ಗರಿಗಳಿಂದ ಸಿಂಗರಿಸಿದ ಎತ್ತಿನಬಂಡಿಯಲ್ಲಿ ಮಕ್ಕಳನ್ನು ಮೆರವಣಿಗೆ ಮಾಡಿ ಶಾಲೆ ಸೇರಿಸಲಾಯಿತು. ಆ ಕ್ಷಣ ಚಿಣ್ಣರ ಸಂಭ್ರಮಕ್ಕೆ ಪಾರವೇ ಇಲ್ಲದಾಯಿತು.

**
ನಗರದ ಕೆಲವು ಶಾಲೆಗಳಲ್ಲಿ ನಿರ್ಲಕ್ಷ್ಯ ಮಾಡಿರಬಹುದು. ಹೆಚ್ಚಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳೇ ಇಲ್ಲಿ ಓದುವುದರಿಂದ ಪ್ರತಿಕ್ರಿಯೆ ಕ್ಷೀಣಿಸಿದೆ 
- ಶಾಂತಕುಮಾರ, ಡಿಡಿಪಿಐ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.