ADVERTISEMENT

ಹಾಳಾಗುತ್ತಿರುವ ತೊಗರಿ ಬೆಳೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:24 IST
Last Updated 12 ಅಕ್ಟೋಬರ್ 2017, 10:24 IST
ಹಾಳಾಗುತ್ತಿರುವ ತೊಗರಿ ಬೆಳೆ
ಹಾಳಾಗುತ್ತಿರುವ ತೊಗರಿ ಬೆಳೆ   

ಅಫಜಲಪುರ: ತಾಲ್ಲೂಕಿನಲ್ಲಿ ಅತಿಯಾದ ಮಳೆಯಿಂದ ತಗ್ಗು ಭೂಮಿ ಮತ್ತು ಜವಳು ಭೂಮಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ನೆಟೆ ಹೊಡೆಯುತ್ತಿದ್ದು, ರೈತರು ಆತಂಕಪಡುವಂತಾಗಿದೆ.

ಜೂನ್ ತಿಂಗಳಲ್ಲಿ ಬಂದಿರುವ ಮಳೆ 2– 3 ತಿಂಗಳ ಹಿಂದೆ ಬರದೇ ತೊಗರಿ ಮತ್ತು ಹತ್ತಿ ಬೆಳೆ ಬೆಳವಣಿಗೆ ಕುಂಠಿತವಾಗಿ ಇಳುವರಿಯು ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನೊಂದು ಕಡೆ ಕಳೆದ 15 ದಿನಗಳಿಂದ ಮಳೆ ಬರುತ್ತಿರುವುದರಿಂದ ಕುಡಿ ಮತ್ತು ಹೂ ಬಿಡುವ ಹಂತದಲ್ಲಿ ತೊಗರಿ ಗಿಡಗಳು ನಟೆ ಹೊಡೆಯುತ್ತಿವೆ. ತಾಲ್ಲೂಕಿನ ಅಳ್ಳಗಿ(ಬಿ), ಗೌರ, ಬಳೂರ್ಗಿ, ಬಡದಾಳ ಮತ್ತು ಗೊಬ್ಬುರ ವಲಯದಲ್ಲಿ ತೊಗರಿ ಬೆಳೆ ಅತಿಯಾದ ಮಳೆಯಿಂದ ನಟೆ ಹೊಡೆಯುತ್ತಿದೆ.

‘ಕೆಲವು ತಗ್ಗು ಜಮೀನಿನಲ್ಲಿ ಮತ್ತು ನೀರು ಹೀರಿಕೊಳ್ಳದ ಜಮೀನಿನಲ್ಲಿ ತೊಗರಿ ಬೆಳೆ ನಟೆ ಹಾಯುತ್ತಿದೆ. ಬಿಸಿಲು ಬಿದ್ದರೆ ಕಡಿಮೆಯಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಹೇಳುತ್ತಾರೆ.

ADVERTISEMENT

ತಹಶೀಲ್ದಾರ ಎಂ.ಎಂ.ಮುಲ್ಕಿಸಿಪಾಯಿ ಅವರನ್ನು ಬುಧವಾರ ವಿಚಾರಿಸಿದಾಗ ‘ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಅಫಜಲಪುರ ತಾಲ್ಲೂಕಿನಲ್ಲಿ ಮಂಗಳವಾರ ಬಿದ್ದ ಮಳೆಯ ಪ್ರಮಾಣ ಅಫಜಲಪುರ ಮಳೆ ಮಾಪನದಲ್ಲಿ 52.9ಮಿ.ಮೀ., ಕರಜಗಿ 53.02, ಅತನೂರ 34.02, ಗೊಬ್ಬುರ(ಬಿ) 09.04 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ 15 ದಿನಗಳಿಂದ ದಿನಬಿಟ್ಟು ದಿನ ಮಳೆಯಾಗಿದ್ದರಿಂದ ಅಲ್ಲಲ್ಲಿ ತೊಗರಿ ಬೆಳೆ ನಟೆ ಹೊಡೆಯುತ್ತಿದೆ. ಹತ್ತಿ ಬೆಳೆಗೂ ರೋಗ ಕಾಣಿಸಿಕೊಂಡಿದ್ದು, ಇಳುವರಿ ಕುಂಠಿತವಾಗಿದೆ. ಇನ್ನೂ ಮಳೆ ಮುಂದುವರಿದರೆ ಬೆಳೆ ಹಾಳಾಗುತ್ತದೆ. ರೈತರು ತೊಗರಿ ಹಾಳಾದ ಜಮೀನಿನಲ್ಲಿ ಕಡಲೇ ಮತ್ತು ಜೋಳ ಬಿತ್ತನೆ ಮಾಡುತ್ತಾರೆ. ಹೀಗಾಗಿ, ರೈತರಿಗೆ ಶೇ 70 ಸಹಾಯಧನದಲ್ಲಿ ಬೀಜ ವಿತರಣೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ವೈ.ಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

***

ತಾಲ್ಲೂಕಿನಲ್ಲಿ ಕೆಲವು ಕಡೆ ಅತಿಯಾದ ಮಳೆಯಿಂದ ಮುಂಗಾರು ಹಂಗಾಮಿನ ತೊಗರಿ ಮತ್ತು ಹತ್ತಿ ಬೆಳೆ ಹಾಳಾಗಿದ್ದು, ಅಂತಹ ರೈತರಿಗೆ ಕಡಲೇ ಜೋಳ ಬಿತ್ತಲು ಸರ್ಕಾರ ಶೇ 70ರ ಸಹಾಯಧನದಲ್ಲಿ ಬೀಜ ವಿತರಣೆ ಮಾಡಬೇಕು.
ಎಂ.ವೈ.ಪಾಟೀಲ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.