ADVERTISEMENT

‘ಬಿಜೆಪಿಗೆ ರಾಷ್ಟ್ರೀಯವಾದದ ಭ್ರಮೆ’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 7:04 IST
Last Updated 7 ಏಪ್ರಿಲ್ 2014, 7:04 IST

ಆಳಂದ: ಕೋಮುವಾದಿ ಭಾರತೀಯ ಜನತಾ ಪಕ್ಷವು ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದಕ್ಕೆ ಪುಷ್ಟಿ ನೀಡಿ ದೇಶದ ಸಾಮರಸ್ಯಕ್ಕೆ ದಕ್ಕೆಯುಂಟು ಮಾಡು­ತ್ತಿದೆ. ಇದಕ್ಕೆ ಪ್ರಜ್ಞಾವಂತ ಮತ­ದಾರರು ಅವಕಾಶ ಮಾಡಿ­ಕೊಡ­ಬಾರದು ಎಂದು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಹೇಳಿದರು. ಪಟ್ಟಣದ ಶ್ರೀರಾಮ ಮಾರುಕಟ್ಟೆ­ಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಯಾವ ಭಾಗದಲ್ಲಿಯೂ ನರೇಂದ್ರ ಮೋದಿ ಅಲೆಯಿಲ್ಲ. ಟನ್ ಗಟ್ಟಲೇ ಹಣ ಇರುವುದರಿಂದ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಆರ್ಎಸ್ಎಸ್ ಬಿಂಬಿಸಿದೆ. ಗುಜರಾತ ರಾಜ್ಯವು ಮಾನವ ಅಭಿವೃದ್ಧಿ ಸ್ಯೂಚಂಕ­ದಲ್ಲಿ 9ನೇ ಸ್ಥಾನದಲ್ಲಿದೆ. ಅಲ್ಲದೇ ತಲಾ ಆದಾಯ, ಅಪೌಷ್ಟಿಕತೆ, ಶಿಕ್ಷಣ ಹಾಗೂ ಕೈಗಾರಿಕೆಗಳ ಅಭಿವೃದ್ಧಿ­ಯಲ್ಲಿ ಕರ್ನಾಟಕಕ್ಕಿಂತ ಹಿಂದೆ ಇದೆ ಎಂದರು.

ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ. ಅಲ್ಲದೇ ಹೈ–ಕ ಅಭಿವೃದ್ದಿಗಾಗಿ  ₨1,630 ಕೋಟಿ ಹಣ ಈ ವರ್ಷ ಮೀಸ­ಲಿರಿ­ಸಲಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲರು ಪಕ್ಷವನ್ನು ಬೆಂಬಲಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಬಿ.ಆರ್.ಪಾಟೀಲ ಮಾತ­ನಾಡಿ, ‘ತಾಲ್ಲೂಕಿನಲ್ಲಿ ನೀರಾವರಿ ಯೋಜನೆ, ಭೀಮಾನದಿಯಿಂದ ಶಾಶ್ವತ­ ನೀರು ಪೂರೈಕೆ ಹಾಗೂ ಅಕ್ರಮ ಸಾರಾಯಿ ನಿಷೇಧ ಬೇಡಿಕೆ ಇಟ್ಟು ಇದಕ್ಕೆ ಸ್ಪಂದಿಸಲು ಒಪ್ಪಿದ ಕಾರಣ ಅಭಿವೃದ್ದಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿಗೆ ಶ್ರಮಿಸು­ತ್ತೇನೆ’ ಎಂದು ಹೇಳಿದರು. ಅಭ್ಯರ್ಥಿ ಎನ್.ಧರ್ಮಸಿಂಗ್, ಕೇಂದ್ರ ಮಾಜಿ ಮಂತ್ರಿ ಸಿ.ಎಮ್.­ಇಬ್ರಾಹಿಂ, ಮುಖಂಡ ಜಗನಾಥ ಶೇಗಜಿ, ರಸೀದ ಅನ್ಸಾರಿ, ವೀರಣ್ಣಾ ಮಂಗಾಣೆ ಮಾತನಾಡಿ ಮತ­ಯಾಚಿಸಿದರು.

ಮಹಾರಾಷ್ಟ್ರದ ಶಾಸಕ ಬಸವ­ರಾಜ ಪಾಟೀಲ ಮುರುಮ, ಅಜಯ­ಸಿಂಗ್, ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ಶರಣಬಸಪ್ಪ ಪಾಟೀಲ ಧಂಗಾಪುರ, ವಿಠಲರಾವ ಪಾಟೀಲ, ಸಾತಲಿಂಗಪ್ಪ ಮೇತ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಕ-­ದೂಮ್ ಅನ್ಸಾರಿ ಕಾಲೇಮಿರ್, ಬಸವಂತರಾವ ಪಾಟೀಲ ಧಂಗಾಪುರ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಕೋಡ್ಲೆ ಮತ್ತಿತರರು ವೇದಿಕೆ ಮೇಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.