ADVERTISEMENT

ವರ್ತಕರಿಗೆ ಜೈಲು, ರೈತರಿಗೆ ₹ 14.5 ಲಕ್ಷ ಪರಿಹಾರ

ಸೂರ್ಯಪಾನ ಖರೀದಿಸಿ ಮೋಸ: ದಶಕದ ಬಳಿಕ ನ್ಯಾಯ ಪಡೆದುಕೊಂಡ ರೈತರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 19:30 IST
Last Updated 16 ನವೆಂಬರ್ 2018, 19:30 IST

ಕಲಬುರ್ಗಿ: ರೈತರಿಂದ ಸೂರ್ಯಪಾನ ಖರೀದಿಸಿ ಹಣ ನೀಡದೆ ವಂಚಿಸಿದ ಇಬ್ಬರು ವರ್ತಕರಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಗುರುಪ್ರಸಾದ ಸಿ. ಅವರು ತೀರ್ಪು ನೀಡಿದ್ದಾರೆ.

ಆಳಂದ ತಾಲ್ಲೂಕಿನ ಕಾಮನಳ್ಳಿ ಗ್ರಾಮದ ಮಲ್ಲಿನಾಥ ವಿಠ್ಠಲರಾವ ಪಾಟೀಲ ಹಾಗೂ ದುತ್ತರಗಾಂವ ಗ್ರಾಮದ ಅಮೃತ ಗುರಣ್ಣ ಮಂಗಾಣೆ ಶಿಕ್ಷೆಗೆ ಒಳಗಾದವರು. ಇವರಿಂದ ಮೋಸಹೋದ ಎಲ್ಲ 29 ರೈತರಿಗೂ ತಲಾ ₹ 50 ಸಾವಿರ (ಒಟ್ಟು ₹ 14.5 ಲಕ್ಷ) ಪರಿಹಾರ ನೀಡಬೇಕು ಎಂದೂ ತೀರ್ಪಿನಲ್ಲಿ ತಿಳಿಸಿದ್ದಾರೆ.

ದುತ್ತರಗಾಂವ ಗ್ರಾಮದ ರೈತ ಈರಣ್ಣ ಹಾಗೂ ಇತರ 28 ಮಂದಿಯಿಂದ ಈ ವ್ಯಾಪಾರಿಗಳು 2005ರ ಫೆಬ್ರುವರಿಯಲ್ಲಿ ಸೂರ್ಯಪಾನ ಖರೀದಿಸಿದ್ದರು. 1,018 ಚೀಲ ಸೂರ್ಯಪಾನಕ್ಕೆ ₹ 1 ಲಕ್ಷದ ರಶೀದಿ ಕೊಟ್ಟಿದ್ದರು. ಹಣವನ್ನು ನಂತರ ಕೊಡುವುದಾಗಿ ನಂಬಿಸಿ ರಶೀದಿ ಮೇಲೆ ಸಹಿ ಪಡೆದಿದ್ದರು. ಮಾಲನ್ನು ಅಕ್ಕಲಕೋಟೆಯ ಆಯಿಲ್‌ ಮಿಲ್‌ಗೆ ಮಾರಾಟ ಮಾಡಿದ್ದರು. ನಂತರ ಬಂದ ಹಣವನ್ನು ರೈತರಿಗೆ ನೀಡದೆ ತಲೆಮರೆಸಿಕೊಂಡಿದ್ದರು.

ADVERTISEMENT

ಈ ಬಗ್ಗೆ ರೈತ ಈರಣ್ಣ ಅವರು ನಿಂಬರ್ಗಾ ಪೊಲೀಸ್‌ ಠಾಣೆಗೆ 2008ರಲ್ಲಿ ದೂರು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಮುಕುಂದ ಎಸ್‌. ದೇಶಪಾಂಡೆ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.