ಕಲಬುರಗಿ: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ (ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆ) ಕಲಬುರಗಿ ಮಹಾನಗರ ಪಾಲಿಕೆಗೆ ದೇಶದ 182ನೇ ಶ್ರೇಯಾಂಕ ದೊರೆತಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರ್‍ಯಾಂಕ್ ಬಹಳ ಸುಧಾರಿಸಿದೆ. ಇದಕ್ಕೆ ನಗರದ ಜನರ ಸಹಕಾರ ಹಾಗೂ ಸಿಬ್ಬಂದಿ ಶ್ರಮವೇ ಕಾರಣ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದ್ದಾರೆ.
2020ರಲ್ಲಿ ಪಾಲಿಕೆಗೆ 358 ಮತ್ತು 2019ರಲ್ಲಿ 366ನೇ ಶ್ರೇಯಾಂಕ ಸಿಕ್ಕಿತ್ತು. ಮಹಾನಗರ ಪಾಲಿಕೆಯು ನಗರದ ನೈರ್ಮಲೀಕರಣ, ಘನತ್ಯಾಜ್ಯ ವಸ್ತು ನಿರ್ವಹಣೆ, ವೈಯಕ್ತಿಕ ಶೌಚಾಲಯಗಳು, ಸಾರ್ವಜನಿಕ ಮತ್ತು ಸಮುದಾಯದ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ, ಬಹಿರ್ದೆಸೆ ಮುಕ್ತವೆಂದು ಗುರುತಿಸಿಕೊಂಡಿದೆ. ಇನ್ನಿತರ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2016, ಪ್ಲಾಸ್ಟಿಕ್ ನಿಷೇಧ ಮತ್ತು ಸ್ವಚ್ಛ ಭಾರತ ಮಿಷನ್ ಸುತ್ತೋಲೆಗಳನ್ವಯ ಪಾಲಿಕೆಯು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಈ ಕಾರಣಕ್ಕಾಗಿಯೇ ಈ ಬಾರಿ ರ್‍ಯಾಂಕಿಂಗ್‌ನಲ್ಲಿ ಸುಧಾರಣೆ ಕಂಡಿದೆ ಎಂದೂ ಅವರು ತಿಳಿಸಿದ್ದಾರೆ.
ಕಲಬುರಗಿ ನಗರದಲ್ಲಿ ಇನ್ನೂ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸುವುದು ಹಾಗೂ ಉದನೂರ ನೆಲ ಭರ್ತಿ ಜಾಗದಲ್ಲಿನ ಲೆಗಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾಮಗಾರಿ ಬಾಕಿ ಇದೆ. ಸದರಿ ಕಾಮಗಾರಿಗಳ ವಿಸ್ತೃತ ವರದಿಯನ್ನು ತಯಾರಿಸಿದ್ದು, ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಪಾಲಿಕೆಗೆ ಇನ್ನೂ ಹೆಚ್ಚಿನ ಅಂಕಗಳು ಲಭಿಸುವ ಸಾಧ್ಯತೆ ಇದೆ ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.