ADVERTISEMENT

200 ಎಕರೆ ಶುಂಠಿ ನೀರು ಪಾಲು

ಸಂಕಷ್ಟಕ್ಕೆ ಸಿಲುಕಿದ ರೈತರು, ಬೆಳೆಗೆ ಮಾರಕವಾದ ಮಳೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 14:42 IST
Last Updated 17 ಅಕ್ಟೋಬರ್ 2020, 14:42 IST
ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಶುಂಠಿ ಬೆಳೆ ಹಾನಿಯಾಗಿರುವುದನ್ನು ರೈತ ತೋರಿಸಿದರು
ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಶುಂಠಿ ಬೆಳೆ ಹಾನಿಯಾಗಿರುವುದನ್ನು ರೈತ ತೋರಿಸಿದರು   

ಯಡ್ರಾಮಿ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಾಲ್ಲೂಕಿನ ಮಾಣಶಿವಣಗಿ ಮತ್ತು ಸುಂಬಡ ಗ್ರಾಮದಲ್ಲಿ ಶುಂಠಿ ಬೆಳೆ ಪೂರ್ತಿ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಭಾರಿ ಬೆಲೆ ಬಂದಿದ್ದರಿಂದ ಪ್ರಸಕ್ತ ವರ್ಷ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಶುಂಠಿ ನಾಟಿ ಮಾಡಿದ್ದಾರೆ. ಆದರೆ ಇದೀಗ ತೇವಾಂಶ ಹೆಚ್ಚಳದಿಂದ ಶುಂಠಿ ನಾಶವಾಗಿ, ರೈತರಲ್ಲಿ ಕಣ್ಣೀರು ತರಿಸಿದೆ. ಶುಂಠಿ ಬಂಪರ್ ಬೆಳೆ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಫಸಲು ಬರುವುದರಲ್ಲಿತ್ತು. ಆದರೆ ಸತತ ಮಳೆಯಿಂದ ಬೆಳೆ ಕೊಳೆತು ಹೋಗಿದೆ.

ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ರೈತರು ಹತ್ತಿ, ತೊಗರಿ ಬಿಟ್ಟು ಶುಂಠಿ ಬೆಳೆದಿದ್ದಾರೆ. ಮಾಣಶಿವಣಗಿಯಲ್ಲಿ ಮಾಳಪ್ಪ ಪೂಜಾರಿ ಚೌದ್ರಿ 2 ಎಕರೆ, ಅಣ್ಣಪ್ಪ 2 ಎಕರೆ, ಅಮಯೋಗಪ್ಪ ಚೌದ್ರಿ 7 ಎಕರೆ, ಸತ್ಯಪ್ಪ ನಾಯ್ಕೋಡಿ 1 ಎಕರೆ, ಪಂಡಿತ ಸಾಹು ಕುಡಿ ಎರಡುವರೆ ಎಕರೆ, ಮಹಾದೇವಪ್ಪ ಚೌದ್ರಿ 1 ಎಕರೆ, ಮಲ್ಲಿಕ್ ಸಾಬ 1 ಎಕರೆ, ಪರಸುರಾಮ ಯಲ್ಲಪ್ಪ 1 ಎಕರೆ, ರಜಕ್ ಸಾಬ 1 ಎಕರೆ, ಕಾಂತಪ್ಪ ಶಿವಶರಣಪ್ಪ 1 ಎಕರೆ, ಸುಂಬಡ ಗ್ರಾಮದ ದೇವಪ್ಪ ಶರಣಪ್ಪ ಒಂದೂವರೆ ಎಕರೆ ಸೇರಿದಂತೆ ಎರಡು ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಎಕರೆ ಶುಂಠಿ ಹಾನಿಯಾಗಿದೆ.

ADVERTISEMENT

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಶುಂಠಿ ಬಿತ್ತನೆ ಆರಂಭವಾಗುತ್ತದೆ. 8 ಅಥವಾ 9 ತಿಂಗಳಲ್ಲಿ ಬೆಳೆ ಬರುತ್ತದೆ. ಒಂದು ಎಕರೆ ಶುಂಠಿ ಬೆಳೆಸಲು ಸುಮಾರು 3 ರಿಂದ 3 ಲಕ್ಷ ತಗಲುತ್ತದೆ. ಇಷ್ಟು ದಿನ ನೀರು, ಗೊಬ್ಬರ ಹಾಕಿ ಬೆಳೆಸಿರುವುದು ವ್ಯರ್ಥವಾಗಿದೆ. ಅದಕ್ಕಾಗಿ ರೈತರ ನೆರವಿಗೆ ಸರ್ಕಾರ ಬರಬೇಕು ಎಂಬುದು ರೈತರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.