ADVERTISEMENT

ಚಿಂಚೋಳಿ| ಹತ್ತು ವರ್ಷವಾದರೂ ಹಂಚಿಕೆಯಾಗದ ಮನೆಗಳು

ಚಿಂಚೋಳಿ: ಪಾಳು ಬಿದ್ದ ಮನೆಗಳು; ದುರಸ್ತಿ ಮಾಡಲು ಸೂಚಿಸಿದ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 23:36 IST
Last Updated 9 ಜೂನ್ 2023, 23:36 IST
ಚಿಂಚೋಳಿ ಪಟ್ಟಣದ ನಿಮಾ ಹೊಸಳ್ಳಿ ರಸ್ತೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿಸಿದ ಮನೆಗಳು ಅನಾಥವಾಗಿವೆ
ಚಿಂಚೋಳಿ ಪಟ್ಟಣದ ನಿಮಾ ಹೊಸಳ್ಳಿ ರಸ್ತೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿಸಿದ ಮನೆಗಳು ಅನಾಥವಾಗಿವೆ   

ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ದಶಕದ ಹಿಂದೆ ನಿರ್ಮಿಸಿದ್ದ 200 ಮನೆಗಳು ನಿರುಪಯೋಗಿಯಾಗಿದೆ. 

ಇಲ್ಲಿನ ಪುರಸಭೆ ವ್ಯಾಪ್ತಿಯ ಈದ್ಗಾ (ನೀಮಾ ಹೊಸಳ್ಳಿ ಮಾರ್ಗದ ರಸ್ತೆ) ಬದಿಯಲ್ಲಿ ಚಿಂಚೋಳಿಯ ಸ.ನಂ 311ರಲ್ಲಿ ಬರುವ 22.38 ಗುಂಟೆ ಜಮೀನು ಪಟ್ಟಣ ಪಂಚಾಯಿತಿ ವತಿಯಿಂದ ಖರೀದಿಸಲಾಗಿತ್ತು. ಇದರಲ್ಲಿ 200 ಮನೆಗಳ ನಿರ್ಮಾಣಕ್ಕೆ ಅಗತ್ಯವಾದಷ್ಟು ಜಮೀನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ನೀಡಿದ ಮೇಲೆ ಇಲ್ಲಿ ಮನೆಗಳು ನಿರ್ಮಿಸಲಾಗಿದೆ ಎನ್ನುತ್ತಾರೆ ಪುರಸಭೆ ಸದಸ್ಯ ಅಬ್ದುಲ್ ಬಾಷೀತ್.

ADVERTISEMENT

ವೈಜನಾಥ ಪಾಟೀಲ ಶಾಸಕರಾಗಿದ್ದ ಅವಧಿಯಲ್ಲಿ ಜಮೀನು ಖರೀದಿಸಲಾಗಿದ್ದು, ಶಾಸಕ ಸುನೀಲ ವಲ್ಲ್ಯಾಪುರ ಅವಧಿಯಲ್ಲಿ ಇಲ್ಲಿ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 2013ರಲ್ಲಿ ಶಾಸಕರಾಗಿದ್ದ ಡಾ. ಉಮೇಶ ಜಾಧವ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದಾರೆ. ಜತೆಗೆ ಫಲಾನುಭವಿಗಳ ಆಯ್ಕೆಯೂ ಪೂರ್ಣಗೊಳಿಸಲಾಗಿದೆ. ಆದರೂ ಈವರೆಗೂ ಮನೆಗಳು ಬಡವರಿಂದ ದೂರವೇ ಉಳಿದಿವೆ.

ಮನೆಗಳು ಪಾಳು ಬಿದ್ದಿವೆ. ವಿದ್ಯುತ್ ಸೌಲಭ್ಯ ಕಲ್ಪಿಸಲು ವಿದ್ಯುತ್ ಕಂಬ ಹಾಕಿ ಟ್ರಾನ್ಸಫರ‍್ಮರ್ ಅಳವಡಿಸಲಾಗಿತ್ತು. ಮನೆಗಳಲ್ಲಿ ವಿದ್ಯುತ್ ಸಂಪರ್ಕದ ವೈರಿಂಗ್ ಕೆಲಸ ಮಾಡಿ ಮೀಟರ್ ಬಾಕ್ಸ್ ಕೂಡಿಸಲಾಗಿತ್ತು. ಆದರೆ ಈಗ ಮನೆಗಳಿಗೆ ಜೋಡಿಸಿದ ವಿದ್ಯುತ್ ತಂತಿ ಕಡಿದು ಹಾಕಲಾಗಿದೆ. ಟ್ರಾನ್ಸಫಾರ್ಮರ್ ಮಾಯವಾಗಿದೆ. ಮೀಟರ್ ಬಾಕ್ಸಗಳು ಒಡೆದುಹೋಗಿವೆ.

ಮನೆಗಳ ಕೆಲಸದಲ್ಲಿ ನೆಲಹಾಸು ಅಪೂರ್ಣವಾಗಿತ್ತು. ಇದನ್ನು ಸರಿಪಡಿಸಿ ಕಿಟಕಿ, ಬಾಗಿಲು ಹಾಳಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಈಗ ಮನೆಗಳ ಮುಂದೆ ಗಿಡಗಂಟೆ ಬೆಳದು ಬಿಕೋ ಎನ್ನುತ್ತಿವೆ. ಇಲ್ಲಿಯೇ ಕೇವಲ 500 ಮೀಟರ್ ದೂರದಲ್ಲಿ ಮುಲ್ಲಾಮಾರಿ ನದಿಯಿದೆ. ಆದರೆ ಬಡಾವಣೆಗೆ ಮಾತ್ರ ನೀರಿನ ಬವಣೆ ತಪ್ಪಿಲ್ಲ. ಇದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ.

2022ರಲ್ಲಿ ಶಾಸಕ ಡಾ. ಅವಿನಾಶ ಜಾಧವ ಅವರು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಒಂದು ತಿಂಗಳಲ್ಲಿ ಮನೆಗಳನ್ನು ದುರಸ್ತಿಗಳಿಸಿ ಬಡವರಿಗೆ ಹಂಚಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು. ಆದರೆ ಕೆಡಿಪಿ ಸಭೆ ನಡೆದು 6 ತಿಂಗಳಿಗೂ ಗತಿಸಿದರೂ ಮನೆಗಳ ದುರಸ್ತಿ ಪೂರ್ಣವಾಗಿಲ್ಲ ಎನ್ನುವುದು ಬಡವರ ಆರೋಪವಾಗಿದೆ.

ಈ ಕುರಿತು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಶಾಖಾಧಿಕಾರಿ ಚೇತನ್ ಅವರನ್ನು ಕೇಳಿದರೆ, ನಾನು ಈಚೆಗೆ ವರ್ಗವಾಗಿ ಇಲ್ಲಿಗೆ ಬಂದಿದ್ದೇನೆ. ಚಿಂಚೋಳಿಯ ಹಳೆಯ ಮನೆಗಳ ವಿಷಯ ನನಗೆ ಗೊತ್ತಿಲ್ಲ ನಾನು ಪಂದು ವಾರದಲ್ಲಿ ಚಿಂಚೋಳಿಗೆ ಬಂದು ನೋಡುತ್ತೇನೆ ಆ ಮೇಲೆ ತಮಗೆ ಮಾಹಿತಿ ಕೊಡುತ್ತೇನೆ ಎಂದಿದ್ದಾರೆ.

ಆನಂದ ಟೈಗರ್ ಅಧ್ಯಕ್ಷರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಪುರಸಭೆ ಚಿಂಚೋಳಿ
ಸ್ವಂತ ಸೂರು ಹೊಂದಬೇಕೆAಬುದು ಎಲ್ಲಾ ಬಡವರ ಕನಸಾಗಿರುತ್ತದೆ. ಚಿಂಚೋಳಿಗೆ ಮನೆಗಳು ಮಂಜೂರಾಗಿವೆ ಎಂದಾಗ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಹಣದ ಡಿಡಿ ಭರಿಸಿ ದಶಕ ಕಳೆದಿದೆ. ಆದರೆ ಬಡವರಿಗೆ ಮನೆ ಸಿಕ್ಕಿಲ್ಲ.ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ
ಆನಂದ ಟೈಗರ್ ಅಧ್ಯಕ್ಷ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಪುರಸಭೆ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.