ADVERTISEMENT

ಮಹಿಳೆಯ ಸೀರೆ ಎಳೆದು ಜೀವ ಬೆದರಿಕೆ: ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 15:50 IST
Last Updated 16 ಸೆಪ್ಟೆಂಬರ್ 2023, 15:50 IST
ಜೈಲು
ಜೈಲು   

ಚಿಂಚೋಳಿ: ಮಹಿಳೆಯ ಸೀರೆ ಎಳೆದು, ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅಪರಾಧಿಗೆ 3 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ತಾಲ್ಲೂಕಿನ ಯಂಪ್ಪಳಿ ಗ್ರಾಮದ ನಿವಾಸಿ ಗುರುನಾಥ ಬಿರಾದಾರ ಎಂಬಾತ 2022ರ ಸೆ.10ರಂದು ತಡರಾತ್ರಿ ಮಹಿಳೆಯೊಬ್ಬರ ಮನೆ ಬಾಗಿಲು ಬಡಿದು, ಬಾಗಿಲು ತೆಗೆಯುತ್ತಿದ್ದಂತೆ ಮಹಿಳೆಯ ಸೀರೆ ಎಳೆದು ಬಲಪ್ರಯೋಗ ಮಾಡಿ, ಅವಾಚ್ಯವಾಗಿ ಬೈದು ಜೀವ ಬೆದರಿಕೆಯೂ ಹಾಕಿದ್ದ.

ಆರೋಪಿಯ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ರೆಡ್ಡಿ ಅವರು ತನಿಖೆ ನಡೆಸಿದ್ದರು. ನಾನಾ ಕಾಯ್ದೆಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ವಾದ ವಿವಾದ ಆಲಿಸಿದ ಚಿಂಚೋಳಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ ಅವರು ಗುರುನಾಥಗೆ ವಿವಿಧ ಸೆಕ್ಷನ್ ಅಡಿ 3 ವರ್ಷ ಸಾದಾ ಕಾರಾಗೃಹ ಹಾಗೂ ₹12,500 ದಂಡ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ ಐದು ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದಾರೆ.

₹12,500 ದಂಡದಲ್ಲಿ ₹10,000 ದೂರುದಾರರಿಗೆ ಪರಿಹಾರ ಹಾಗೂ ₹2,500 ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಾಂತಕುಮಾರ ಜಿ. ಪಾಟೀಲ ಅವರು ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.