ADVERTISEMENT

ಯುವಕನ ಕೊಲೆ: ಇಬ್ಬರು ಮಹಿಳೆಯರು ಸೇರಿ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 5:13 IST
Last Updated 3 ಏಪ್ರಿಲ್ 2021, 5:13 IST
ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಯುವಕನ ಕೊಲೆ ಆರೋಪದ ಮೇರೆಗೆ ಐವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ
ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಯುವಕನ ಕೊಲೆ ಆರೋಪದ ಮೇರೆಗೆ ಐವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ   

ಕಲಬುರ್ಗಿ: ಆಳಂದ ತಾಲ್ಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಯುವಕನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಮಹಿಳೆಯರೂ ಸೇರಿ ಐವರು ಆರೋಪಿಗಳನ್ನು ಎರಡೇ ದಿನದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿರೋಳ್ಳಿ ಗ್ರಾಮದ ನಾಗಪ್ಪ ಅಂದಣ್ಣ ವಾಡೇದ ಎಂಬ ಯುವಕನೇ ಕೊಲೆಯಾದ ವ್ಯಕ್ತಿ. ಮಹಾರಾಷ್ಟ್ರದ ಅಕ್ಕಲಕೋಟೆಯ ಕೊಳಚೆಯೊಂದರಲ್ಲಿ ಈತನ ದೇಹ ಮಾರ್ಚ್‌ 30ರಂದು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಹಿರೋಳ್ಳಿ ಗ್ರಾಮದವರಾದ ಮಲ್ಲಿನಾಥ ಲಕ್ಷ್ಮಣರಾವ್‌ ಗುರುಸಿದ್ಧ, ಬಸವರಾಜ ರೇವಣಸಿದ್ಧಪ್ಪ ವಾಡೇದ್, ಹಣಮಂತ ಫಕೀರಪ್ಪ ಬೆಳ್ಳಿಕಟ್ಟಿ, ಗಾಂಧಾರಬಾಯಿ ಹಣಮಂತ ತೋರಣಗಿ, ನಾಗಮ್ಮ ಮಲ್ಲಿನಾಥ ವಾಡೇದ್ ಬಂಧಿತರು. ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೊಲೆಯಾದ ನಾಗಪ್ಪನಿಗೆ ಮದುವೆ ಮಾಡಿಕೊಳ್ಳಲು ಹುಡುಗಿ ತೋರಿಸುವ ನೆಪ ಮಾಡಿ ಮಾರ್ಚ್‌ 29ರಂದು ಕರೆದುಕೊಂಡು ಹೋಗಿದ್ದರು. ಚಾಕುವಿನಿಂದ ಇರಿದು, ಕುಡುಗೋಲಿನಿಂದ ಕೊಯ್ದು, ಕೊಡಲಿಯಿಂದ ದೇವಹನ್ನು ಕತ್ತರಿಸಿ ಎರಡು ಭಾಗ ಮಾಡಿದ್ದರು. ತುಂಡಾದ ದೇಹವನ್ನು ಎರಡು ಚೀಲಗಳಲ್ಲಿ ತುಂಬಿಕೊಂಡು ಮಹಾರಾಷ್ಟ್ರದ ಅಕ್ಕಲಕೋಟೆಯ ಹೊಲವೊಂದರ ಬಳಿ ಕೊಳಚೆ ನೀರಿನಲ್ಲಿ ಎಸೆದಿದ್ದರು. ದೇಹ ಪತ್ತೆಯಾದ ನಂತರ ಮಾದನ ಹಿಪ್ಪರಗಾ ಹಾಗೂ ಆಳಂದ ಪೊಲೀಸರ ತಂಡ ರಚನೆ ಮಾಡಿ, ಪ್ರಕರಣ ಬೇಧಿಸಲಾಗಿದೆ.

ಎಸ್ಪಿ ಸಿಮಿ ಮರಿಯಮ್‌ ಜಾರ್ಜ್‌ ಹಾಗೂ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರಮಾರ್ಗದರ್ಶನದಲ್ಲಿ ಡಿಎಸ್‌ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಆಳಂದ ಸಿಪಿಐ ಎಸ್‌.ಮಂಜುನಾಥ, ಪಿಎಸ್‌ಐಗಳಾದ ಮಹಾಂತೇಶ ಪಾಟೀಲ, ಇಂದುಮತಿ, ಸಿಬ್ಬಂದಿಯಾದ ಪ್ರಭಾವತಿ, ಚಂದ್ರಕಾಂತ, ಲಕ್ಷ್ಮಣ, ಸಿದ್ಧರಾಮ, ಮಲ್ಲಿಕಾರ್ಜುನ ಗೋಟೂರ, ಶಿವಲಿಂಗಪ್ಪ, ಮಹಿಬೂಬ್‌ ಶೇಖ್‌, ಚಂದ್ರಶೇಖರ, ಮಲ್ಲಿನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.