ADVERTISEMENT

ಚಿಂಚೋಳಿ: ಮೃತ ಶಿಕ್ಷಕನ ಕುಟುಂಬಕ್ಕೆ ₹50 ಲಕ್ಷ ಪರಿಹಾರದ ಭರವಸೆ

ಕುಟುಂಭಸ್ತರಿಗೆ ಸಾಂತ್ವನ ಹೇಳಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:31 IST
Last Updated 16 ಮೇ 2025, 15:31 IST
ಚಿಂಚೋಳಿ ತಾಲ್ಲೂಕಿನ ಬುರುಗಪಳ್ಳಿಯಲ್ಲಿರುವ ಮೃತಪಟ್ಟ ಶಿಕ್ಷಕರ ಮನೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಹಾಗೂ ಇತರ ಅದಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿದರು
ಚಿಂಚೋಳಿ ತಾಲ್ಲೂಕಿನ ಬುರುಗಪಳ್ಳಿಯಲ್ಲಿರುವ ಮೃತಪಟ್ಟ ಶಿಕ್ಷಕರ ಮನೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಹಾಗೂ ಇತರ ಅದಿಕಾರಿಗಳು ಕುಟುಂಬಕ್ಕೆ ಸಾಂತ್ವನ ಹೇಳಿದರು   

ಚಿಂಚೋಳಿ: ಒಳಮೀಸಲಾತಿಗಾಗಿ ಪರಿಶಿಷ್ಟರ ಸಮೀಕ್ಷೆ ವೇಳೆ ಹೃದಯಘಾತದಿಂದ ಮೃತಪಟ್ಟಿರುವ ತಾಲ್ಲೂಕಿನ ಚತ್ರಸಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ನಾಗಶೆಟ್ಟಿ ಬಾಸಪಳ್ಳಿ ಅವರ ಮನೆಗೆ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ಶೇಶಕ ಅಲ್ಲಾಬಕಾಶ, ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೂರ್ಯಕಾಂತ ಮದಾನೆ, ಬಿಇಒ ವಿ. ಲಕ್ಷ್ಮಯ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಚಿಂಚೋಳಿ ಸಹಾಯಕ ನಿರ್ಶೇಶಕ ಪ್ರಭುಲಿಂಗ ವಾಲಿ, ಸೇಡಂನ ವಿಜಯಕುಮಾರ, ಮೊದಲಾದವರು ಭೇಟಿ ನೀಡಿದರು. ಸರ್ಕಾರದಿಂದ ಸೂಕ್ತ ವಿಶೇಷ ಪರಿಹಾರ ಮಂಜೂರು ಮಾಡುವ ಕುರಿತು ಅಧಿಕಾರಿಗಳು ಶಿಕ್ಷಕನ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

₹ 50 ಲಕ್ಷ ಪರಿಹಾರಕ್ಕೆ ಹೆಚ್ಚುವರಿ ನಿರ್ದೇಶಕರ ಪತ್ರ: ಮೃತ ಶಿಕ್ಷಕನ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಮಂಜೂರು ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಅಲ್ಲಾಬಕಾಶ ಅವರು ಇಲಾಖೆ ಆಯುಕ್ತರಿಗೆ ಮೇ 15ರಂದು ಪತ್ರ ಬರೆದು ಮೃತರ ಪತ್ನಿ ಗೃಹಿಣಿಯಾಗಿದ್ದು, ಇಬ್ಬರು ಪುತ್ರರು ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದು, ಒಬ್ಬ ಪುತ್ರ ಕಾಲೇಜು ವ್ಯಾಸಂಗ ಮಾಡುತ್ತಿದ್ದಾನೆ. ಹೀಗಾಗಿ ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ಮೃತರ ಕುಟುಂಬದ ವಾರಸುದಾರರಿಗೆ ₹ 50 ಲಕ್ಷ ವಿಶೇಷ ಪರಿಹಾರ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ADVERTISEMENT

₹ 25 ಲಕ್ಷ ಪರಿಹಾರ ನೀಡಿ: ವಿಶೇಷ ಪ್ರಕರಣದಡಿಯಲ್ಲಿ ಮೃತ ಶಿಕ್ಷಕನ ಕುಟುಂಬಕ್ಕೆ ಕಂದಾಯ ಇಲಾಖೆಯಿಂದಲೂ ₹ 25 ಲಕ್ಷ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಂಚೋಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಕುರಿತು ತಹಶೀಲ್ದಾರ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಮಕ್ಸೂದ್‌ ಅಲಿ, ಮಲ್ಲಿಕಾರ್ಜುನ ಪಾಲಾಮೂರು, ಕೇಶವ ಕುಲಕರ್ಣಿ, ಕಿಶನ್ ನಿಟ್ಟೂರಕರ, ಜಯಪ್ಪ ಚಾಪಲ್, ಖುರ್ಷಿದಮಿಯಾ, ಶಿವಪ್ರಸಾದ ಪಿ.ಜಿ., ವೇದಕುಮಾರ ಶಾಸ್ತ್ರಿ, ನಾಗೇಂದ್ರ, ವೀರೇಂದ್ರ, ರವಿಕಿರಣ ಮೊದಲಾದವರು ಹಾಜರಿದ್ದರು.

ಚಿಂಚೋಳಿ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮತ್ತು ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕಂದಾಯ ಇಲಾಖೆಯಿಂದ ಪರಿಹಾರಕ್ಕೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.