ADVERTISEMENT

ಅಪರಾಧ ಪ್ರಕರಣಗಳಲ್ಲಿ ಗಣನೀಯ ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 10:01 IST
Last Updated 3 ಜನವರಿ 2018, 10:01 IST

ಕಲಬುರ್ಗಿ: ‘ಈಶಾನ್ಯ ವಲಯ ವ್ಯಾಪ್ತಿಯ ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 2017ನೇ ಸಾಲಿನಲ್ಲಿ ಅಪರಾಧ ಪ್ರಕರಣಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನೆಯಲ್ಲಿ ಕಳವು ಪ್ರಕರಣ ಶೇ 20ರಷ್ಟು, ಮಾದಕ ದ್ರವ್ಯಗಳು ಮತ್ತು ಮಾನಸಿಕ ವ್ಯಸನ ಪದಾರ್ಥಗಳ ಕಾಯ್ದೆ (ಎನ್‌ಡಿಪಿಎಸ್‌) ಪ್ರಕರಣಗಳು ಕಡಿಮೆಯಾಗಿವೆ. 2016ನೇ ಸಾಲಿಗೆ ಹೋಲಿಸಿದಾಗ ರಸ್ತೆ ಅಪಘಾತಗಳ ಸಂಖ್ಯೆ 2,408 ರಿಂದ 2,303ಕ್ಕೆ ಇಳಿಕೆಯಾಗಿದೆ’ ಎಂದು ತಿಳಿಸಿದರು.

‘ಪ್ರತಿಬಂಧಕ ಕಾಯ್ದೆ (ಸಿಆರ್‌ಪಿಸಿ 107) ಅಡಿ 2015 ಮತ್ತು 2016ರಲ್ಲಿ ಒಟ್ಟು 3,951 ದೂರುಗಳನ್ನು ದಾಖಲಿಸಲಾಗಿದೆ. ಘೋಷಿತ ಅಥವಾ ವೃತ್ತಿಪರ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳುವುದು (ಸಿಆರ್‌ಪಿಸಿ ಸೆಕ್ಷನ್‌ 110) ಕಾಯ್ದೆಯಡಿ 2015ರಲ್ಲಿ 1,007, 2016ರಲ್ಲಿ 1,059 ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಕ್ರಮ ಶಸ್ತ್ರಾಸ್ತ್ರ ಸಾಗಾಟಕ್ಕೆ ಸಂಬಂಧಿಸಿದಂತೆ 21 ಪ್ರಕರಣಗಳಲ್ಲಿ 46 ಅಕ್ರಮ ಶಸ್ತ್ರಾಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಡ ಪಿಸ್ತೂಲ್‌ಗಳು ಮಧ್ಯಪ್ರದೇಶದಿಂದ ಆಮದಾಗುತ್ತಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ಶೀಘ್ರವೇ ಅಕ್ರಮ ನಾಡ ಪಿಸ್ತೂಲು ಮಾರಾಟ ಜಾಲವನ್ನು ಪತ್ತೆ ಹಚ್ಚಲಾಗುವುದು’ ಎಂದು ಹೇಳಿದರು.

‘ಈಶಾನ್ಯ ವಲಯ ಐಜಿಪಿಯಾಗಿ ಒಂದು ವರ್ಷ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಇದೀಗ ಬೆಳಗಾವಿಗೆ ವರ್ಗವಾಗಿದ್ದು, ಅಲ್ಲಿಯೂ ದಕ್ಷತೆಯಿಂದ ಸೇವೆ ಸಲ್ಲಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್, ಎನ್.ಶಶಿಕುಮಾರ್, ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಕಲಬುರ್ಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿ.ಜೆ.ಲೋಕೇಶ್ ಇದ್ದರು.

* * 

ಕಲಬುರ್ಗಿಯಲ್ಲಿ 16 ಜನ ಹಾಗೂ ಯಾದಗಿರಿಯಲ್ಲಿ ಒಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 23 ಜನರ ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿದೆ. ಅಲೋಕಕುಮಾರ್‌,
ಐಜಿಪಿ, ಈಶಾನ್ಯ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.